ಬೆಂಗಳೂರು: ಪಂಚಮಸಾಲಿ ಸಮುದಾಯದ ಮೀಸಲಾತಿ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಭೆ ಸ್ಪಷ್ಟ ತೀರ್ಮಾನ ಕೈಗೊಳ್ಳಲು ವಿಫಲವಾಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಿಎಂ ಯಾವುದೇ ರೀತಿಯ ಭರವಸೆ ನೀಡಿಲ್ಲ. ಮುಂದಿನ ಹೋರಾಟದ ಬಗ್ಗೆ ಸಮಾಲೋಚನೆ ಮಾಡುತ್ತೇವೆ ಎಂದು ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಪಂಚಮಸಾಲಿ ಮೀಸಲಾತಿ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ. ಮೀಸಲಾತಿ ಈಡೇರಿಸುವ ಬಗ್ಗೆ ಯಾವುದೇ ಸಮಯ ನಿಗದಿ ಮಾಡಿಲ್ಲ. ನಿಮ್ಮ ಜೊತೆ ಚರ್ಚೆಗೆ ಮುಕ್ತವಾಗಿದ್ದೇವೆ ಅಂದಿದ್ದಾರೆ. ಮುಂದೆ ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಸಭೆಯಲ್ಲಿ ಯಾವುದೇ ನಿರೀಕ್ಷಿತ ಭರವಸೆ ಸಿಗದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ತೀರ್ಮಾನ ಕೈಗೊಳ್ಳಲು ಒಂದು ಸಮಯ ನಿಗದಿ ಮಾಡಿ. ಆರು ತಿಂಗಳೋ, ಒಂದು ವರ್ಷವೋ ಅಥವಾ ಎರಡು ವರ್ಷವೋ ಒಂದು ಸಮಯ ನಿಗದಿ ಮಾಡಿ ಎಂದು ಮನವಿ ಮಾಡಿದೆವು. ಆದರೆ, ಸಿಎಂ ಶಾಶ್ವತವಾದ ಹಿಂದುಳಿದ ವರ್ಗಗಳ ಆಯೋಗದ ಪೂರ್ಣ ವರದಿ ಬಂದಿಲ್ಲ. ಕೇವಲ 12 ಜಿಲ್ಲೆಗಳ ವರದಿ ಬಂದಿಲ್ಲ ಎಂದಿದ್ದಾರೆ. ವರದಿ ಬಂದ ಬಳಿಕ ಯಾವಾಗ ಜಾರಿ ಎಂಬ ಬಗ್ಗೆ ದಿನಾಂಕ ಹೇಳಿ ಎಂದು ಮನವಿ ಮಾಡಿದರೂ ಸಿಎಂ ಅದಕ್ಕೆ ಒಪ್ಪಿಲ್ಲ ಎಂದರು.
ಹಿಂದಿನ ಸರ್ಕಾರ ಘೋಷಿಸಿರುವ 2D ಮೀಸಲಾತಿ ಜಾರಿಗೆ ತನ್ನಿ, ಇಲ್ಲವಾದರೆ 2A ಮೀಸಲಾತಿ ನೀಡಿ. ಅದೂ ಆಗಿಲ್ಲವಾದರೆ ಒಬಿಸಿಗಾದರೂ ಸೇರಿಸಿ ಎಂಬ ಬಗ್ಗೆ ಮನವಿ ಮಾಡಿದ್ದೇವೆ. ಆದರೆ ಸಿಎಂ ಸಿದ್ದರಾಮಯ್ಯ ನೀತಿ ಸಂಹಿತೆ ಜಾರಿಯಲ್ಲಿ ಇರೋದ್ರಿಂದ ತಕ್ಷಣವೇ ಈ ಬಗ್ಗೆ ತೀರ್ಮಾನಿಸಲು ಆಗಲ್ಲ ಎಂದಿದ್ದಾರೆ. ನಾವು ಒಂದು ಸಭೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ವಕೀಲರ ಜೊತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
'ಸ್ವಾಮೀಜಿ ಮೂಗಿಗೆ ತುಪ್ಪ ಸವರುವ ಕೆಲಸ': ಇದೇ ವೇಳೆ ಮಾತನಾಡಿದ ಬಿಜೆಪಿ ಸಂಸದ ಈರಣ್ಣ ಕಡಾಡಿ, ಚುನಾವಣೆ ಕಾರಣದಿಂದ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ನಾವು ಸ್ವಾಮೀಜಿ ಬೆನ್ನಿಗೆ ನಿಲ್ಲುತ್ತೇವೆ. 2ಡಿ ಜಾರಿ ಅಥವಾ 2ಎ ಮೀಸಲಾತಿ ನೀಡಿ ಎಂದು ಬೇಡಿಕೆ ಇಟ್ಟಿದ್ದೇವೆ. ಚುನಾವಣೆ ನೆಪ ಹೇಳಿ ಸಭೆಯಲ್ಲಿ ಯಾವುದೇ ಫಲಪ್ರದ ಚರ್ಚೆ ಆಗಿಲ್ಲ. ಯಾವುದೇ ನಿರ್ಣಯವಾಗಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನವೂ ಆಗಿಲ್ಲ. ಇದರಿಂದ ಸಮಾಜಕ್ಕೆ ಅಸಮಾಧಾನವಾಗಿದೆ. ಮುಂದಿನ ತೀರ್ಮಾನವನ್ನು ಸ್ವಾಮೀಜಿ ತೆಗೆದುಕೊಳ್ಳುತ್ತಾರೆ ಎಂದರು.
ಸಭೆ ಬಳಿಕ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಪಂಚಮಸಾಲಿ ಸಮುದಾಯಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ನಿಶ್ಚಿತವಾಗಿ ಮೀಸಲಾತಿ ಸಿಗುವ ವಿಶ್ವಾಸವಿದೆ. ಈ ಕುರಿತಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಕೂಲಂಕಷವಾಗಿ ಚರ್ಚೆ ನಡೆಸಲಾಗಿದೆ. ನಮ್ಮ ನಾಯಕರು ನಮ್ಮ ಸಮುದಾಯದ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಪಂಚಮಸಾಲಿಗರಿಗೆ ಮೀಸಲಾತಿ: ಸಿಎಂ ಭರವಸೆ