ಬೆಳಗಾವಿ: ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಕೆಎಂಎಫ್ ಡೈರಿ ಬಳಿ ಬುಧವಾರ ಸಂಜೆ ಗುಂಡಿನ ದಾಳಿ ನಡೆದಿದ್ದು, ಯುವಕನಿಗೆ ಗಂಭೀರ ಗಾಯವಾಗಿದೆ. ಟಿಳಕವಾಡಿಯ ದ್ವಾರಕಾ ನಗರ ಐದನೇ ಕ್ರಾಸ್‌ನ ನಿವಾಸಿ ಪ್ರಣೀತ್ ಕುಮಾರ್ (31) ಗಾಯಾಳು.
ಯುವಕನ ತೊಡೆ, ಗಲ್ಲಕ್ಕೆ ಗುಂಡು ತಗುಲಿದೆ. ಬಿಮ್ಸ್ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇಹಕ್ಕೆ ತಾಗಿದ ಗುಂಡುಗಳನ್ನು ಜೇಬಿನಲ್ಲಿಟ್ಟುಕೊಂಡೇ ಗಾಯಾಳು ಆಸ್ಪತ್ರೆಗೆ ಬಂದಿದ್ದಾನೆ ಎಂದು ತಿಳಿದು ಬಂದಿದೆ.

ಗುಂಡು ಹಾರಿಸಿದ ಆರೋಪಿಗಳು ಪರಾರಿಯಾಗಿದ್ದಾರೆ. ವೈಯಕ್ತಿಕ ದ್ವೇಷದಿಂದ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾಳಮಾರುತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಗಾಯಾಳು ಜೊತೆ ಮಾತನಾಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪ್ರಾಥಮಿಕ ಮಾಹಿತಿ ಪ್ರಕಾರ, ಪ್ರಣೀತ್ ಕುಮಾರ್ ತನ್ನ ಸ್ನೇಹಿತೆಯ ಮನೆಗೆ ಊಟಕ್ಕೆ ಹೋಗಿದ್ದಾಗ, ತನ್ನ ಹಳೆಯ ಪ್ರೇಮದ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ಆಗ ಸ್ನೇಹಿತೆ ನಾನು ಮಾತಾಡುತ್ತೇನೆ ಎಂದು ಹೇಳುತ್ತಾರೆ. ಸ್ಥಳಕ್ಕೆ ಬಂದ ಆತನ ಹಳೆಯ ಪ್ರಿಯತಮೆ ಮತ್ತು ಇಬ್ಬರು ತಗಾದೆ ತೆಗೆದಿದ್ದಾರೆ. ಆ ಬಳಿಕ ಗುಂಡಿನ ದಾಳಿ ನಡೆದಿದ್ದು, ಒಂದು ಗುಂಡು ಪ್ರಣೀತ್ ಕಿವಿಗೆ ತಾಗಿದ್ದರೆ, ಮತ್ತೊಂದು ಕಾಲಿಗೆ ತಗುಲಿದೆ. ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ" ಎಂದರು.
ಇದನ್ನೂ ಓದಿ: ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ ಯತ್ನ; ದರೋಡೆಕೋರರ ಕಾಲಿಗೆ ಗುಂಡೇಟು