ಬೆಳಗಾವಿ: ರಾಮದುರ್ಗ ತಾಲೂಕಿನ ಉದುಪುಡಿ ಗ್ರಾಮದಲ್ಲಿರುವ ಶಿವಸಾಗರ ಸಕ್ಕರೆ ಕಾರ್ಖಾನೆಯಿಂದ ಯಾವುದೇ ನೋಟಿಸ್ ನೀಡದೇ 380 ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವ ಆರೋಪ ಕೇಳಿ ಬಂದಿದೆ.
ಹತ್ತಕ್ಕೂ ಹೆಚ್ಚು ವರ್ಷಗಳಿಂದ ಶಿವಸಾಗರ ಶುಗರ್ ಕಾರ್ಖಾನೆಯಲ್ಲಿ 380 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ, 2017ರಲ್ಲಿಯೇ ಶಿವಸಾಗರ ಸಕ್ಕರೆ ಕಾರ್ಖಾನೆ ಮತ್ತು ಆಗ್ರೋ ಪ್ರೊಡಕ್ಟ್ ಲಿಮಿಟೆಡ್ ಆಡಳಿತ ಮಂಡಳಿಯ ಹಣಕಾಸಿನ ವ್ಯವಹಾರದಲ್ಲಿ ಲೋಪದಿಂದ ಬಂದ್ ಮಾಡಲಾಗಿತ್ತು. ಬಳಿಕ ಕಳೆದ ಮೂರು ವರ್ಷಗಳಿಂದ ಲೀಸ್ ಪಡೆದು ಅರಿಹಂತ ಶುಗರ್ ಇಂಡ್ರಸ್ಟ್ರೀಸ್ ನವರು ಸಕ್ಕರೆ ಕಾರ್ಖಾನೆ ನಡೆಸುತ್ತಿದ್ದರು. ಈಗ ಅರಿಹಂತ ಸಕ್ಕರೆ ಕಾರ್ಖಾನೆಯವರು ಮತ್ತೊಬ್ಬರಿಗೆ ಕಾರ್ಖಾನೆ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ.
ಕಳೆದ ನಾಲ್ಕು ದಿನಗಳ ಹಿಂದಷ್ಟೇ ಹೊಸಬರು ಸಕ್ಕರೆ ಕಾರ್ಖಾನೆ ಖರೀದಿಸಿದ್ದಾರೆ. ಹೊಸ ಮಾಲೀಕರು ಕಾರ್ಖಾನೆ ವಶಕ್ಕೆ ಪಡೆಯುತ್ತಿದ್ದಂತೆ ಕೆಲಸ ಮಾಡುತ್ತಿದ್ದ 380 ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಲಾಗಿದೆ. ಇದರಿಂದ ಅತಂತ್ರರಾಗಿರುವ ಕಾರ್ಮಿಕರು ತಮಗೆ ನ್ಯಾಯ ಒದಗಿಸುವಂತೆ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.
ಕಾರ್ಮಿಕ ಬಸವರಾಜ ಲಿಂಗರೆಡ್ಡಿ ಮಾಧ್ಯಮಗಳ ಜೊತೆಗೆ ಮಾತನಾಡಿ, ನಾವು ಕಾರ್ಖಾನೆ ಖಾಯಂ ನೌಕರರಾಗಿದ್ದು, ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಆದರೆ, ಈಗ ನಮ್ಮನ್ನು ಕಾರಣ ಇಲ್ಲದೇ ಕೆಲಸದಿಂದ ತೆಗೆದಿದ್ದಾರೆ. ಹಾಗಾಗಿ, ಹೊಸ ಮಾಲೀಕರು ನಮ್ಮನ್ನೇ ಮುಂದುವರಿಸಬೇಕು. ಸೇವಾ ಭದ್ರತೆ ಸಿಗೋವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು. ಬಳಿಕ ಸೇವೆಯಲ್ಲಿ ಮುಂದುವರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ನೂರಾರು ಕಾರ್ಮಿಕರು ಮನವಿ ಸಲ್ಲಿಸಿದರು.
ಇದನ್ನೂ ಓದಿ: ಕುತ್ತಿಗೆಮಟ್ಟ ಮಣ್ಣಲ್ಲಿ ಹೂತುಕೊಂಡು ರುದ್ರಭೂಮಿ ಕಾರ್ಮಿಕರ ಪ್ರತಿಭಟನೆ