ಕಾರವಾರ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿರುವ ಲಾರಿ ಘಟನಾ ಸ್ಥಳದಿಂದ 60 ಮೀಟರ್ ದೂರ ಹಾಗೂ ನದಿಯಲ್ಲಿ 5 ಮೀಟರ್ ಆಳದಲ್ಲಿರುವ ಸಾಧ್ಯತೆ ಇದೆ. ಆದರೆ ನದಿ ನೀರಿನ ಹರಿವು ಹೆಚ್ಚಿರುವ ಕಾರಣ ಸದ್ಯದ ಸ್ಥಿತಿಯಲ್ಲಿ ಹುಡುಕಾಟ ಕಷ್ಟ ಎಂದು ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಹೇಳಿದ್ದಾರೆ.
ಶಿರೂರಿನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರೂರು ಗುಡ್ಡ ಕುಸಿತ ಪ್ರದೇಶ ಹಾಗೂ ಗಂಗಾವಳಿ ನದಿಯಲ್ಲಿ ಸೇನಾಪಡೆ ಹಾಗೂ ನೌಕಾದಳದ ಸಿಬ್ಬಂದಿ ಮೂರು ಸ್ಥಳಗಳಲ್ಲಿ ಲೋಹದ ವಸ್ತುಗಳಿರುವುದನ್ನು ಪತ್ತೆ ಮಾಡಿದ್ದಾರೆ. ಈ ಪೈಕಿ ರೆಲಿಂಗ್, ಟವರ್, ಲಾರಿ, ಟ್ಯಾಂಕರ್ ಕ್ಯಾಬಿನ್ ಸಿಗಬೇಕಿದ್ದು ಇವುಗಳ ಪೈಕಿ ಅರ್ಜುನ್ ಲಾರಿ ಅವರಿದ್ದ ಯಾವುದು ಎಂಬುದು ಗೊತ್ತಾಗಬೇಕಿದೆ ಎಂದರು.
60 ಮೀ. ಉದ್ದ ಹಾಗೂ 20 ಮೀ. ಆಳದಲ್ಲಿ ಒಂದು ಲೋಹ ಸಿಕ್ಕಿದ್ದು, ಇದು ಲಾರಿಯದ್ದು ಎಂದು ತಿಳಿದುಬಂದಿದೆ. 400 ಕಟ್ಟಿಗೆ ತುಂಡುಗಳು ಟ್ರಕ್‌ನಲ್ಲಿದ್ದವು. ಆದರೆ 500 ಮೀ. ದೂರದಲ್ಲಿ ಮರದ ದಿಮ್ಮಿಗಳು ಲಭ್ಯವಾಗಿದ್ದು, ಕೆಲವು ದಿಮ್ಮಿಗಳು ಕೊಚ್ಚಿಹೋಗಿವೆ. ಸದ್ಯ ಎರಡು ಸ್ಪಾಟ್‌ಗಳ ಪೈಕಿ ಲಾರಿ ಇರುವುದು ಎಲ್ಲಿ ಎಂದು ನೋಡಲಾಗುತ್ತಿದೆ ಎಂದು ಹೇಳಿದರು.
ಇನ್ನು ಲಾರಿ ಬಗ್ಗೆ ಮರ್ಸಿಡಿಸ್ ಬೆನ್ಜ್ ಕಂಪೆನಿ ಜೊತೆಯೂ ಮಾತನಾಡಲಾಗಿದೆ. ಕಂಪನಿ ಪ್ರಕಾರ, ಟ್ರಕ್‌ನ ಉಳಿದ ಭಾಗಗಳ ಜೊತೆಯೇ ಕ್ಯಾಬಿನ್ ಕೂಡಾ ಇದೆ. ಅದರೊಳಗೆ ಅರ್ಜುನ್ ಇರುವ ಸಾಧ್ಯತೆಯಿದೆ. ಆದರೆ ನದಿಯ ನೀರಿನ ಹರಿವಿನ ವೇಗ 8 ನಾಟ್ಸ್ ಇದೆ. ಡೀಪ್ ಡೈವರ್ಸ್‌ಗಳಿಗೆ ಅಲ್ಲಿ ಹೋಗಿ ಪತ್ತೆ ಮಾಡುವುದು ಕಷ್ಟವಾಗುತ್ತಿದೆ. ನೌಕಾನೆಲೆಯವರ ಪ್ರಕಾರ, ಗರಿಷ್ಟ 3 ನಾಟ್ಸ್ನಲ್ಲಿ ಡೀಪ್ ಡೈವರ್ಸ್ ಕಾರ್ಯಾಚರಣೆ ಮಾಡಬಹುದು. ಹಾಗಾಗಿ ನದಿಯ ನೀರಿನ ಹರಿವು ಕಡಿಮೆ ಆಗುವವರೆಗೂ ಡೀಪ್ ಡೈವರ್ಸ್ ಕಾರ್ಯಾಚರಣೆ ಮಾಡುವುದು ಕಷ್ಟ. ಮಳೆ ಪ್ರಮಾಣ ಕಡಿಮೆಯಾದರೆ ರಾತ್ರಿ ವೇಳೆಯೂ ಸಹಿತ ಕಾರ್ಯಾಚರಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಶಾಸಕ ಸತೀಶ್ ಸೈಲ್ ಮಾತನಾಡಿ, ಸೇನೆ, ನೌಕಾನೆಲೆ ಹಾಗೂ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಅವರು ನೀಡಿದ ಮಾಹಿತಿ ಒಂದಕ್ಕೊಂದು ತಾಳೆಯಾಗುತ್ತಿದೆ. ಮುಳುಗು ತಜ್ಞರ ಮೂಲಕ ಇನ್ನಷ್ಟು ಕಾರ್ಯಾಚರಣೆ ನಡೆಸಲಾಗುವುದು. ನಾವು ಏನು ಕೆಲಸ ಮಾಡಿಲ್ಲ ಎಂದು ಸದನದಲ್ಲಿ ಆರೋಪ ಮಾಡಲಾಗಿದೆ. ನನ್ನ ಚುನಾವಣೆಗೂ ಇಷ್ಟು ಕೆಲಸ ಮಾಡಿಲ್ಲ. ಅಷ್ಟು ಕೆಲಸ ಇಲ್ಲಿ ಮಾಡಿದ್ದೇನೆ. ಆದರೆ ಕೇಂದ್ರ ಸಚಿವ ಕುಮಾರಸ್ವಾಮಿ ಬಂದ ಮೇಲೆಯೇ ಕೆಲಸ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ನಾನೆಷ್ಟು ಕೆಲಸ ಮಾಡಿದ್ದೇನೆ ಎಂದು ಸತ್ಯವನ್ನು ಮಾಧ್ಯಮದವರೇ ನೋಡಿದ್ದಾರೆ ಎಂದು ತಿಳಿಸಿದರು.
ಶಿರೂರು ದುರ್ಘಟನೆ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ನಾನು ಕೆಲಸ ಮಾಡಿಲ್ಲ ಎಂದು ಸಾಬೀತಾದರೆ ರಾಜೀನಾಮೆ ನೀಡಲೂ ತಯಾರಿದ್ದೇನೆ ಎಂದು ಶಾಸಕ ಸೈಲ್ ಹೇಳಿದರು. 17,000 ಲೀ. ಆಕ್ಸಿಜನ್ ಕ್ಯಾಬಿನ್ ಒಳಗೆ ಸಂಗ್ರಹವಾಗೋದ್ರಿಂದ 6 ದಿನಗಳ ಕಾಲ ಜೀವಂತವಾಗಿರಬಹುದು. ಆದರೆ ಘಟನೆ ನಡೆದು 10 ದಿನಗಳು ನಡೆದಿವೆ. ಅರ್ಜುನ್ ಬದುಕುಳಿದಿರುವ ಸಾಧ್ಯತೆ ಕಡಿಮೆ. ಇಂದು ರಾತ್ರಿ ಕೂಡಾ ಡ್ರೋನ್ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದರು.
ಪತ್ತೆಯಾಗಿದ್ದ ಮೃತದೇಹದ ಅರ್ಧ ಭಾಗ: ಶಿರೂರು ಗುಡ್ಡ ಕುಸಿತ ಪ್ರಕರಣದ ಬಳಿಕ ಅಂಕೋಲಾದ ಬೆಳಾಂಬರದ ಕಡಲತೀರದ ಬಳಿ ಪತ್ತೆಯಾಗಿದ್ದ ಕೇವಲ ಕಾಲುಗಳು ಮಾತ್ರ ಇರುವ ಅರ್ಧ ಮೃತದೇಹ ತಮಿಳುನಾಡು ಮೂಲದ ಗ್ಯಾಸ್ ಟ್ಯಾಂಕರ್ ಚಾಲಕ ಶರವಣ ಅವರ ದೇಹ ಎಂಬುದು ಡಿಎನ್ಎ ಮೂಲಕ ಖಚಿತಗೊಂಡಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಖಚಿತಪಡಿಸಿದ್ದಾರೆ. ಗುಡ್ಡ ಕುಸಿತದ ವೇಳೆ ಶರವಣ ನಾಪತ್ತೆಯಾದ ಬಗ್ಗೆ ಅವರ ಸಂಬಂಧಿಕರು ದೂರು ನೀಡಿದ್ದರು. ಅರ್ಧ ದೇಹ ಸಿಕ್ಕ ನಂತರ ಡಿ.ಎನ್.ಎ ಪರೀಕ್ಷೆ ಮಾಡಲಾಗಿತ್ತು. ಒಟ್ಟು 11 ಮಂದಿ ನಾಪತ್ತೆಯಾದವರ ಪೈಕಿ 8 ಮೃತದೇಹಗಳು ಪತ್ತೆಯಾಗಿದ್ದು ಇನ್ನೂ ಮೂವರಿಗಾಗಿ ಹುಡುಕಾಟ ಮುಂದುವರಿಸಲಾಗಿದೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ: ಯಾರೇ ತಪ್ಪು ಮಾಡಿದ್ದರೂ ಕ್ರಮ - ಸಿಎಂ ಸಿದ್ದರಾಮಯ್ಯ - SHIRURU HILL COLLAPSE TRAGEDY