ಕಾರವಾರ (ಉತ್ತರ ಕನ್ನಡ) : ಶಿರೂರು ಗುಡ್ಡ ಕುಸಿತದ ಬಳಿ ಗುರುತು ಮಾಡಿದ ಜಾಗದಲ್ಲಿ ಎಷ್ಟೇ ಹುಡುಕಾಡಿದರೂ ನಾಪತ್ತೆಯಾದ ಮೂವರು ಹಾಗೂ ಲಾರಿ ಸುಳಿವು ಪತ್ತೆಯಾಗದ ಹಿನ್ನೆಲೆ ಇದೀಗ ಅನಿವಾರ್ಯವಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಕೈ ಬಿಡುವ ನಿರ್ಧಾರಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದವರಿಗಾಗಿ ಕಳೆದ 12 ದಿನಗಳಿಂದ ನಿರಂತರವಾಗಿ ಹುಡುಕಾಟ ಮುಂದುವರೆಸಲಾಗಿದೆ. ಆದರೆ ಈವರೆಗೂ ಲಾರಿ ಹಾಗೂ ನಾಪತ್ತೆಯಾದ ಮೂವರ ಗುರುತು ಪತ್ತೆಯಾಗಿಲ್ಲ. ಸೇನೆ, ನೌಕಾಪಡೆ, ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡಗಳ ಜೊತೆಗೂಡಿ ನಿವೃತ್ತ ಮೇಜರ್ ಜನರಲ್ ನೇತೃತ್ವದ ಖಾಸಗಿ ಏಜೆನ್ಸಿ ಮೂಲಕ ನದಿಯಲ್ಲಿ ಪತ್ತೆ ಮಾಡಲಾಗಿದ್ದ ನಾಲ್ಕು ಸ್ಥಳಗಳಲ್ಲಿಯೂ ಹುಡುಕಾಟ ಮಾಡಲಾಗಿದೆ.
ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಕಳೆದ ಎರಡು ದಿನದಿಂದ ಗಂಗಾವಳಿ ನದಿಯ ಹರಿವಿನ ವೇಗದ ನಡುವೆಯೂ ನದಿಯಾಳಕ್ಕೆ ಇಳಿದು ಗುರುತಿಸಿದ ಜಾಗದಲ್ಲಿ ಹುಡುಕಾಟ ನಡೆಸಿದ್ದು, ಕಲ್ಲು ಮಣ್ಣುಗಳ ಹೊರತಾಗಿ ಲಾರಿ ಅಥವಾ ಇನ್ನಿತರ ದೊಡ್ಡ ವಸ್ತುವಿನ ಭಾಗಗಳು ಪತ್ತೆಯಾಗಿಲ್ಲ. ಇದರಿಂದ ಜಿಲ್ಲಾಡಳಿತ ಮತ್ತೆ ಕಾರ್ಯಾಚರಣೆ ಮುಂದುವರಿಸಲು ನದಿ ಹರಿವಿನ ವೇಗ ಅಡಚಣೆಯಾಗುತ್ತಿರುವ ಹಿನ್ನೆಲೆ ತಾತ್ಕಾಲಿಕವಾಗಿ ಕಾರ್ಯಾಚರಣೆ ಕೈ ಬಿಡುವ ನಿರ್ಧಾರಕ್ಕೆ ಬಂದಿದೆ.
ಈ ಬಗ್ಗೆ ಹೇಳಿಕೆ ನೀಡಿದ ಮುಳುಗು ತಜ್ಞ ಈಶ್ವರ ಮಲ್ಫೆ ಅವರು, 'ಭಾನುವಾರ ಒಂದು ಪಾಯಿಂಟ್‌ನಲ್ಲಿ ಹುಡುಕಾಟ ಬಾಕಿಯಿತ್ತು. ಹೈಟೆನ್ಶನ್ ವಿದ್ಯುತ್ ತಂತಿ ತೆಗೆದು ಹುಡುಕಾಡಿದ್ದೇವೆ. ಆದರೆ ಏನೂ ಸಿಕ್ಕಿಲ್ಲ. ಎನ್ಡಿಆರ್ಎಫ್ನ ಒಬ್ಬರು ಸೇರಿ ಡೈವ್ ಮಾಡಿದ್ದೆವು. ಸುಮಾರು 300 ಮೀಟರ್ವರೆಗೂ ಡೈವ್ ಮಾಡಿದಾಗ ಆಲದ ಮರ ಸಿಕ್ಕಿದೆ. ಆದರೆ ಲಾರಿಯ ಯಾವುದೇ ಭಾಗವೂ ಸಿಕ್ಕಿಲ್ಲ' ಎಂದರು.
'ನೀರಿನಾಳದಲ್ಲಿ ಏನೂ ಕಾಣಿಸಲ್ಲ. ಕೇವಲ ಮುಟ್ಟಿನೋಡಿದರಷ್ಟೇ ಗೊತ್ತಾಗುತ್ತೆ. ಹುಟುಕಾಟದ ವೇಳೆ ನೀರಿನಾಳದಲ್ಲಿ ತಗಡು ಶೀಟ್, ಮರ, ಕಲ್ಲು ಮಾತ್ರ ಸಿಗುತ್ತಿದೆ. ಸದ್ಯ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇವೆ. ಜಿಲ್ಲಾಡಳಿತ ಮತ್ತೆ ಹೇಳಿದ್ರೆ ಮತ್ತೆ ಕಾರ್ಯಾಚರಣೆ ಮಾಡುತ್ತೇವೆ. ಆದರೆ ನೀರು ತಿಳಿಯಾಗದೆ ಏನೂ ಮಾಡಲು ಸಾಧ್ಯವಿಲ್ಲ. ನೀರಿನಾಳದಲ್ಲಿ ಏನೂ ಕಾಣುವುದಿಲ್ಲ' ಎಂದು ಮುಳುಗುತಜ್ಞ ಈಶ್ವರ ಮಲ್ಪೆ ಹೇಳಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಮಾಹಿತಿ ನೀಡಿದ್ದು, 'ನಿನ್ನೆ ನೀಡಿದ ಮೂರು ಸ್ಥಳ ಹಾಗೂ ಇಂದು ಒಂದು ಸ್ಥಳದಲ್ಲಿ ಈಶ್ವರ ಮಲ್ಪೆ ತಂಡ ಹುಡುಕಾಟ ಮಾಡಿದೆ. ಆದರೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಇಲ್ಲಿಯೂ ಮಣ್ಣು ಕಲ್ಲು ಸಿಕ್ಕಿದ್ದು, ನೀರಿನ ಹರಿವಿನ ವೇಗ ಹೆಚ್ಚಿರುವ ಕಾರಣ ಕಾರ್ಯಾಚರಣೆ ಕಷ್ಟವಾಗುವುದರ ಬಗ್ಗೆ ತಿಳಿಸಿದ್ದಾರೆ. ಮುಂದಿನ ಕಾರ್ಯಾಚರಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ' ಎಂದು ತಿಳಿಸಿದರು.
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡವರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಪ್ರತಿಕ್ರಿಯಿಸಿದ ಅವರು, 'ಆರಂಭದಲ್ಲಿ ಮಣ್ಣಿನ ಅಡಿ ಲಾರಿ ಎಂದಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿ ಒಂದು ವಾರದಲ್ಲಿಯೇ ಮಣ್ಣು ತೆಗೆದು ಹುಡುಕಾಟ ನಡೆಸಲಾಗಿತ್ತು. ಈಗ ನೀರಿನಲ್ಲಿ ಇದೆ ಎಂದಾಗ ನೀರಿನಲ್ಲಿ ಕಾರ್ಯಾಚರಣೆ ಮಾಡಿದ್ದೇವೆ. ಎಲ್ಲಾ ಪ್ರಯತ್ನ ಮಾಡಿ ಹುಡುಕಾಟ ಮಾಡಿದ್ದೇವೆ. ಸ್ವತಃ ಸಿಎಂ, ಕಂದಾಯ ಸಚಿವರು ಬಂದು ಹೋಗಿದ್ದಾರೆ. ಇಷ್ಟಾದರೂ ಮೂವರು ಸಿಗದೇ ಇರುವುದು ಬೇಸರ ತಂದಿದೆ' ಎಂದರು.
ಆದರೆ ದೇಹ ಸಿಗದೇ ಇದ್ದವರಿಗೂ ಅವರ ಅವಲಂಬಿತರ ಬಳಿ ಅಗ್ರಿಮೆಂಟ್ ಮಾಡಿಕೊಂಡು ಪರಿಹಾರ ನೀಡುತ್ತೇವೆ. ಮೃತರ ಮಕ್ಕಳಿಗೆ ಶಿಕ್ಷಣಕ್ಕೆ ಸಮಸ್ಯೆಯಾದರೆ ಅವರ ಜೊತೆ ನಾವು ಇರುತ್ತೇವೆ. ಕಾರ್ಯಾಚರಣೆ ಸ್ಥಗಿತ ಆಗಿಲ್ಲ. ಆದರೆ ನದಿ ವೇಗವಾಗಿ ಹರಿಯುತ್ತಿರುವ ಕಾರಣ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮಗೂ ಬಹಳ ಬೇಸರವಾಗಿದೆ. ನೀರಿನ ಪ್ರಮಾಣ ಕಡಿಮೆ ಆದ ನಂತರ ಕಾರ್ಯಾಚರಣೆ ಮಾಡುತ್ತೇವೆ. ಆಗ ಮುಳುಗಿರುವ ಟ್ರಕ್ ಮೇಲಕ್ಕೆ ಎತ್ತುವ ಪ್ರಯತ್ನ ಮಾಡುತ್ತೇವೆ. ಗುಡ್ಡ ಕುಸಿತದ ಬಗ್ಗೆ ಮಾಹಿತಿ ಪಡೆದು ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಶಿರೂರು ಗುಡ್ಡ ಕುಸಿತ; ಇನ್ನೂ ಸಿಗದ ಮೂವರ ಸುಳಿವು - ಇಂದಿನಿಂದ ಫ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ - Shiruru Hill Collapse Case