ಬೆಂಗಳೂರು: ರಾಜ್ಯಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡುವಂತೆ ಕೋರಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಬರೆದ ಪತ್ರದಲ್ಲಿ, ''ಸ್ವಾತಂತ್ರ್ಯ ಪೂರ್ವದಲ್ಲೂ, ನಂತರವೂ ಕಾಂಗ್ರೆಸ್ ಪಕ್ಷವನ್ನು ವೀರಶೈವ ಲಿಂಗಾಯತರು ಬೆಂಬಲಿಸಿರುವುದು ಅನೇಕ ಘಟನೆಗಳಿಂದ ಕಂಡು ಬರುತ್ತದೆ. ಸ್ವಾತಂತ್ರ್ಯಾ ನಂತರ ಚುನಾವಣೆಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗಿನ ಚುನಾವಣಾ ಅಂಕಿ-ಅಂಶಗಳನ್ನು ಪರಾಮರ್ಶಿಸುವುದಾದರೆ ವೀರಶೈವ-ಲಿಂಗಾಯತರು 199ರವರೆಗೆ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರಾಗಿದ್ದರು. ಇದಕ್ಕೆ ಹಲವಾರು ಕಾರಣಗಳಿವೆ. ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ವೀರೇಂದ್ರ ಪಾಟೀಲ್ ಮುಂತಾದ ನಮ್ಮ ಸಮಾಜದ ನಾಯಕರುಗಳು ಹಾಗೂ ಮುತ್ಸದ್ದಿಗಳು ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ನಮ್ಮ ಸಮಾಜದ ಪ್ರತಿನಿಧಿಗಳಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ'' ಎಂದು ಸ್ಮರಿಸಿದ್ದಾರೆ.
''ಆದರೆ ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ವೀರಶೈವ ಲಿಂಗಾಯತರ ನಾಯಕತ್ವವನ್ನು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಕಡೆಗಣಿಸುತ್ತಾ ಬಂದಿದ್ದರ ಫಲವಾಗಿ ಕಾಂಗ್ರೆಸ್ ಪಕ್ಷವು ತನ್ನ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಘಟನೆಗಳಾಗಿವೆ ಎಂದರೆ ತಪ್ಪಿಲ್ಲ. ಈಗಲೂ ಕಾಲಮಿಂಚಿಲ್ಲ, ಇನ್ನಾದರೂ ನಮ್ಮ ಸಮುದಾಯದವರಿಗೆ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಾಯಕತ್ವ ಕಲ್ಪಿಸುವ ಮೂಲಕ ಪ್ರಾತಿನಿಧ್ಯ ನೀಡುತ್ತೀರೆಂದು ನಂಬಿರುತ್ತೇವೆ'' ಎಂದು ಉಲ್ಲೇಖಿಸಿದ್ದಾರೆ.
''ನಮ್ಮ ರಾಜ್ಯದವರೇ ಆದ ತಮಗೆ ಪ್ರತ್ಯೇಕವಾಗಿ ನಮ್ಮ ಸಮಾಜದ ಬಗ್ಗೆ ಹೇಳುವಂತದ್ದು ಏನೂ ಇಲ್ಲ. ಕಳೆದ 7 ದಶಕಗಳಿಂದ ನೀವು ಹತ್ತಿರದಿಂದ ನಮ್ಮ ಸಮಾಜವನ್ನು ಬಲ್ಲವರಾಗಿದ್ದೀರಿ. ಇದನ್ನೆಲ್ಲವನ್ನು ಸರಿಪಡಿಸುವ ಶಕ್ತಿ ತಮ್ಮಲ್ಲಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ಆದ್ಯತೆ ನೀಡವುದರ ಮುಖಾಂತರ ಕಾಂಗ್ರೆಸ್ ಪಕ್ಷವು ತನ್ನ ಗತವೈಭವವನ್ನು ಗಳಿಸುವಂತಾಗಲಿ ಎಂದು ಆಶಿಸುತ್ತೇವೆ'' ಎಂದಿದ್ದಾರೆ.
''ರಾಜ್ಯಸಭಾ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ದೊರೆಯುವ 3 ಸ್ಥಾನಗಳಲ್ಲಿ ನಮ್ಮ ಸಮಾಜಕ್ಕೆ 1 ಸ್ಥಾನವನ್ನು ಕೊಡಬೇಕೆಂದು ಕೋರುತ್ತೇವೆ. ಅಲ್ಲದೇ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ನಮ್ಮ ಸಮಾಜದವರಿಗೆ ಆದ್ಯತೆ ನೀಡಬೇಕು. ಈ ಮೂಲಕ ಹಿಂದೆ ಆಗಿರುವಂತಹ ನ್ಯೂನತೆಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಿ, ತಮ್ಮ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷವು ಭವ್ಯ ಭಾರತ ನಿರ್ಮಾಣ ಮಾಡುವಂತಾಗಲು ಕಾಂಗ್ರೆಸ್ ಪಕ್ಷ ಮತ್ತು ಚುನಾವಣೆಗಳಲ್ಲಿ ನಮ್ಮ ಸಮಾಜಕ್ಕೆ ಆದ್ಯತೆಯ ಮೇರೆಗೆ ಸ್ಥಾನಮಾನ ನೀಡಬೇಕು'' ಎಂದು ಶಾಮನೂರು ಶಿವಶಂಕರಪ್ಪ ಕೋರಿದ್ದಾರೆ.
ಇದನ್ನೂ ಓದಿ: ನಾವು ಜೈ ಶ್ರೀರಾಮ್ ಘೋಷಣೆ ಕೂಗುತ್ತೇವೆ, ಕೇಸರಿ ಶಾಲು ಬಿಜೆಪಿ ಸ್ವತ್ತಲ್ಲ: ಎಂ.ಬಿ.ಪಾಟೀಲ್