ಮೈಸೂರು: ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರೊಬ್ಬರು, ಚಿಕಿತ್ಸೆ ಫಲಿಸದೇ ಮೃತಪಟ್ಟ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಂಜನಗೂಡು ತಾಲೂಕಿನ ಇಬ್ಜಾಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಶಿವು ಬಂಧಿತ ಆರೋಪಿ. ಅದೇ ಗ್ರಾಮದ ಮಹದೇವ ನಾಯಕ(40) ಮೃತರು.
ಏನಿದು ಘಟನೆ?: ಜ.19 ರಂದು ಹಾಲು ಉತ್ಪಾದಕರಿಗೆ ಬಾಕಿ ಇರುವ ಹಾಲಿನ ಹಣವನ್ನು ಪಾವತಿಸಿ ಎಂದು ಡೈರಿಯ ಕಾರ್ಯದರ್ಶಿ
ಶಿವು ಅವರಿಗೆ ಡೈರಿಯ ಉಪಾಧ್ಯಕ್ಷ ಮಹದೇವ ನಾಯಕ ಸೂಚನೆ ನೀಡಿದ್ದರು. ಈ ವೇಳೆ, ಇಬ್ಬರ ನುವೆ ಮಾತಿಗೆ ಮಾತು ಬೆಳೆದು ಕಾರ್ಯದರ್ಶಿ ಶಿವು ಏಕಾಏಕಿ ಉಪಾಧ್ಯಕ್ಷ ಮಹದೇವ ನಾಯಕ ಅವರ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಹದೇವ ನಾಯಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ಮೃತಪಟ್ಟಿದ್ದರು.
ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪಿಎಸ್ಐ ರಮೇಶ್ ಕರಕಿಕಟ್ಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ರೌಡಿಶೀಟರ್ನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು: ಹಳೆ ದ್ವೇಷ ಶಂಕೆ
ತಾಯಿ, ತಂಗಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ ಪುತ್ರನ ಬಂಧನ(ಮೈಸೂರು): ಮತ್ತೊಂದೆಡೆ, ಹೆತ್ತ ತಾಯಿ ಹಾಗೂ ತಂಗಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿತ್ತು. ಹಿರಿಕ್ಯಾತನಹಳ್ಳಿಯ ಅನಿತಾ(40) ಹಾಗೂ ಮಗಳು ಧನುಶ್ರೀ(19) ಮೃತರು. ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರವಾಗಿ ತಂಗಿಯೊಂದಿಗೆ ದ್ವೇಷ ಬೆಳೆಸಿಕೊಂಡಿದ್ದ ಅಣ್ಣ ನಿತಿನ್ ಈ ಕೃತ್ಯ ಎಸಗಿದ್ದ. ಆರೋಪಿಯು ಮೊದಲು ತಂಗಿಯನ್ನು ಕೆರೆಗೆ ತಳ್ಳಿದ್ದ. ಈ ವೇಳೆ ರಕ್ಷಿಸಲು ಬಂದ ತಾಯಿಯನ್ನೂ ಸಹ ಕೆರೆಗೆ ತಳ್ಳಿದ್ದ.
ಹನಗೋಡು ಗ್ರಾಮದ ಬೇರೆ ಯುವಕನೊಂದಿಗಿನ ಪ್ರೀತಿ ವಿಚಾರವಾಗಿ ಅಣ್ಣ- ತಂಗಿ ಮಧ್ಯೆ ವೈಮನಸ್ಸು ಬೆಳೆದಿತ್ತು. ಆಗಾಗ ಇಬ್ಬರ ನಡುವೆ ಗಲಾಟೆ ಕೂಡ ನಡೆಯುತ್ತಿತ್ತು. ನಾವೇ ಹಲವು ಬಾರಿ ಸಮಾಧಾನಪಡಿಸಿದ್ದೆವು. ಮಂಗಳವಾರ ಸಂಜೆ ಹೆಮ್ಮಿಗೆ ಗ್ರಾಮದಲ್ಲಿರುವ ಮಾವನ ಮನೆಗೆ ಹೋಗುವ ಕಾರಣ ನೀಡಿ ತಾಯಿ ಹಾಗೂ ತಂಗಿಯನ್ನು ನಿತಿನ್ ಬೈಕ್ನಲ್ಲಿ ಕರೆದೊಯ್ದು ಈ ಕೃತ್ಯವೆಸಗಿದ್ದಾನೆ ಎಂದು ತಂದೆ ಸತೀಶ್ ಹೇಳಿದ್ದರು. ಒದ್ದೆ ಬಟ್ಟೆಯಲ್ಲೇ ಮನೆಗೆ ಹಿಂದಿರುಗಿ ಈ ಬಗ್ಗೆ ಮಾಹಿತಿ ನೀಡಿದ್ದಾಗಿ ಸತೀಶ್ ತಿಳಿಸಿದ್ದರು.