ಬೆಂಗಳೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಇಂದಿನಿಂದ ಆರಂಭವಾಗುತ್ತಿದ್ದು, ಮಾ.22 ರವರೆಗೆ ಪರೀಕ್ಷೆ ನಡೆಯಲಿದೆ. 6,98,624 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ.
ನಗರದ ಪಿಯುಸಿ ಕಾಲೇಜುಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಪರೀಕ್ಷೆ ನಡೆಯಲಿದೆ. ಮೊದಲ 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಸಮಯಾವಕಾಶವಿದ್ದು, 10.30 ರಿಂದ 1.30 ರವರೆಗೆ 3 ಗಂಟೆ ಉತ್ತರ ಬರೆಯಲು ಸಮಯಾವಕಾಶ ನೀಡಲಾಗಿದೆ. ಇಂದಿನಿಂದ 22ರ ವರೆಗೆ ನಡೆಯುತ್ತಿರುವ ಪಿಯುಸಿ ಪರೀಕ್ಷೆಯಲ್ಲಿ 6,98,624 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಪಿಯುಸಿಗೆ 1,124 ಪರೀಕ್ಷಾ ಕೇಂದ್ರಗಳನ್ನು ನಿಗದಿ ಮಾಡಲಾಗಿದೆ.
ಪರೀಕ್ಷಾ ಅಕ್ರಮ ತಡೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಲ್ಲಾ ವ್ಯವಸ್ಥೆ ಮಾಡಿದ್ದು, ವಿಚಕ್ಷಣದಳಗಳಿಂದ ಪರಿಶೀಲನಾ ಕಾರ್ಯ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಜೆರಾಕ್ಸ್ ಅಂಗಡಿಗಳನ್ನು ಮಧ್ಯಾಹ್ನದವರೆಗೆ ಮುಚ್ಚಲಾಗಿದೆ.
ಈ ಬಾರಿ ಮೂರು ಪರೀಕ್ಷೆಯ ಪ್ರಯೋಗ ಆರಂಭಿಸಿದ್ದು, ಎಲ್ಲಾ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು ಮೂರರಲ್ಲಿ ಯಾವುದಾದರು ಪರೀಕ್ಷೆಗೆ ಹಾಜರಾಗಬೇಕು. ಮೂರು ಪರೀಕ್ಷೆಯಲ್ಲಿ ಮೊದಲು ಅಥವಾ ಎರಡು ಯಾವ ಪರೀಕ್ಷೆಯನ್ನು ಬೇಕಿದ್ದರೂ ಆಯ್ಕೆ ಮಾಡಬಹುದು. ಮೂರು ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಟಾಪ್ ಮಾರ್ಕ್ಸ್ ಪರಿಗಣನೆ ಮಾಡಲಾಗುತ್ತದೆ. ಹೆಚ್ಚು ಅಂಕ ಪಡೆದಿರುವ ಮಾರ್ಕ್ಸ್ ಮಾತ್ರ ತೆಗೆದುಕೊಳ್ಳಲಾಗುವುದು. ಹಾಗಾಗಿ ಈ ಬಾರಿಯ ಪರೀಕ್ಷೆ ವಿಶೇಷವಾಗಿದೆ.
ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಕಾರ್ಯದಿಂದ ಪ್ರೌಢಶಿಕ್ಷಕರನ್ನು ಹೊರಗಿಟ್ಟಿರುವ ಕ್ರಮಕ್ಕೆ ಆಕ್ರೋಶ, ಸಭಾತ್ಯಾಗ