ಮೈಸೂರು : ಶಿಲ್ಪಿ ಅರುಣ್ ಯೋಗಿರಾಜ್ ಇಂದು ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ, ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ. ನಂತರ ಅಯೋಧ್ಯೆಯಲ್ಲಿ ತಾನು ಕೆತ್ತಿದ ಬಾಲರಾಮ ಮೂರ್ತಿಯ ಫೋಟೋಗಳನ್ನು ತೋರಿಸಿ, ಅದರ ವಿಶೇಷತೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ್ದಾರೆ.
ಶ್ರದ್ಧೆಯಿಂದ ಬಾಲರಾಮನನ್ನ ಮಾಡಿದ್ದಾರೆ - ಸುತ್ತೂರು ಶ್ರೀ: ಶ್ರೀರಾಮ ಎಲ್ಲರೂ ಇಷ್ಟಪಡುವ ವ್ಯಕ್ತಿ. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರ ದಕ್ಷಿಣ ಹಾಗೂ ಉತ್ತರ ಭಾರತದ ವಾಸ್ತುಶಿಲ್ಪದ ಸಮ್ಮಿಲನವಾಗಿ ರೂಪಿತವಾಗಿದೆ ಎಂದು ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ. ನಾನು ಅಯೋಧ್ಯೆಗೆ ಹೋದರೂ ರಾಮ ಮಂದಿರ ನೋಡಲು ಸಾಧ್ಯವಾಗಲಿಲ್ಲ. ರಾಮ ಮಂದಿರಕ್ಕೆ ಹೋದರೆ ರಾಮಾಯಣ, ಮಹಾಭಾರತದ ಸನ್ನಿವೇಶಗಳು ನೋಡಲು ಸಿಗುತ್ತವೆ. ಈಗ ದೇವಾಲಯದ 30 ರಷ್ಟು ಕೆಲಸ ಮುಗಿದಿದೆ. ಶೇಕಡಾ 70ರಷ್ಟು ಕಾಮಗಾರಿಗಳು ನಡೆಯುತ್ತಿವೆ. ಮಂದಿರ ಸುಂದರವಾಗಿದೆ. ಶಿಲ್ಪಿ ಅರುಣ್ ಅದ್ಭುತ ಕಲಾವಿದ. ಬಾಲರಾಮನನ್ನ ಅದ್ಭುತವಾಗಿ ಕೆತ್ತಿದ್ದಾರೆ ಎಂದು ಹೇಳಿದ್ದಾರೆ. ಅರುಣ್ ಯೋಗಿರಾಜ್ ಅವರು ಜೆಎಸ್ಎಸ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಇಂತಹ ಶಿಲ್ಪಿಯ ಮೂರ್ತಿ ಜನ ಮನ್ನಣೆ ಪಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು.
ಶ್ರೀಗಳು ಮೂರ್ತಿಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ - ಶಿಲ್ಪಿ ಅರುಣ್ ಯೋಗಿರಾಜ್ : ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ನಂತರ ಶಿಲ್ಪಿ ಅರುಣ್ ಯೋಗಿರಾಜ್ ಮಾಧ್ಯಮದವರೊಂದಿಗೆ ಮಾತನಾಡಿದರು. ತನ್ನ ಬಾಲ್ಯದ ವಿದ್ಯಾಭ್ಯಾಸವನ್ನು ಜೆಎಸ್ಎಸ್ ಸಂಸ್ಥೆಯಲ್ಲೇ ಪಡೆದಿದ್ದು, ಪೂಜ್ಯರ ಆಶೀರ್ವಾದ ಪಡೆಯಲು ಮಠಕ್ಕೆ ಬಂದಿದ್ದೇನೆ. ಸುತ್ತೂರು ಶ್ರೀಗಳನ್ನು ಅಯೋಧ್ಯೆಯಲ್ಲೇ ಭೇಟಿ ಮಾಡಬೇಕಿತ್ತು. ಆದರೆ, ಕೆಲಸದ ಒತ್ತಡದಿಂದ ಆಗಲಿಲ್ಲ. ಬಾಲರಾಮನ ಮೂರ್ತಿಯ ಬಗ್ಗೆ ಶ್ರೀಗಳ ಅಭಿಪ್ರಾಯ ಕೇಳಬೇಕಿತ್ತು. ಅದಕ್ಕೆ ಮೂರ್ತಿಯ ಬಗ್ಗೆ ಶ್ರೀಗಳಿಗೆ ವಿವರಿಸಿದ್ದೇನೆ. ವಿಗ್ರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದ್ದಾರೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ಭಾರತದಲ್ಲಿ ಶಿಲ್ಪಿಯೊಬ್ಬರನ್ನ ಮಠವೊಂದು ಗುರುತಿಸುವುದು ಇದೇ ಮೊದಲು. ಮುಂದೆ ಮತ್ತಷ್ಟು ಕಲಾವಿದರನ್ನು ಗುರ್ತಿಸುವ ಕೆಲಸ ಆಗಲಿ ಎಂದು ಇದೇ ಸಂದರ್ಭದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಆಶಿಸಿದ್ದಾರೆ.
ಇದನ್ನೂ ಓದಿ: ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಹರಿದು ಬಂದ ಅಭಿನಂದನೆಗಳ ಮಹಾಪೂರ