ಬೆಳಗಾವಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆಗೆ ಹೈಕಮಾಂಡ್ ಅಸ್ತು ಎಂದಿದೆ. ಆದರೆ, ಹೈಕಮಾಂಡ್ ಒತ್ತಡ ಹಾಕಿದ್ರೂ ಸಹ ಜಿಲ್ಲಾ ನಾಯಕರ ಅಣತಿಗಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕಾಯುತ್ತಿದ್ದಾರೆ.
ಬೆಳಗಾವಿಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿಸುವಂತೆ ಹೈಕಮಾಂಡ್, ಸಿಎಂ ಹಾಗೂ ಡಿಸಿಎಂ ಅವರಿಂದಲೂ ಸಹ ಸತೀಶ್ ಜಾರಕಿಹೊಳಿ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೆ ಜಿಲ್ಲೆಯ ನಾಯಕರ ಸಹಮತ ಬೇಕು ಎನ್ನುತ್ತಿರುವ ಸಚಿವರು, ಚರ್ಚೆ ಮಾಡಿ ಅಂತಿಮ ನಿರ್ಧಾರ ಹೇಳುತ್ತೇವೆ ಎಂದಿದ್ದಾರೆ.
ಗೋಕಾಕ್ ಹಿಲ್ ಗಾರ್ಡನ್ನಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಪ್ರಿಯಾಂಕಾ ಮತ್ತು ಮೃಣಾಲ್ ಹೆಸರು ಚರ್ಚೆಯಲ್ಲಿದೆ. ಆದರೆ, ಇನ್ನೂ ಅಂತಿಮವಾಗಿಲ್ಲ. ಚುನಾವಣೆ ಮಾಡುವವರು ಸ್ಥಳೀಯ ನಾಯಕರು. ಹಾಗಾಗಿ, ಅವರ ಜೊತೆಗೆ ಮತ್ತೊಮ್ಮೆ ಚರ್ಚಿಸಿ ಅಂತಿಮವಾಗಿ ಹೈಕಮಾಂಡ್ಗೆ ತಿಳಿಸುತ್ತೇವೆ ಎಂದರು.
ಇನ್ನು ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಚುನಾವಣೆಗೆ ಎಲ್ಲ ರೀತಿ ತಯಾರಿ ನಡೆಸಿದ್ದೇವೆ. ಈಗಾಗಲೇ ಅಭ್ಯರ್ಥಿಗಳ ಒಂದು ಪಟ್ಟಿ ಬಿಡುಗಡೆ ಆಗಿದ್ದು, ಇನ್ನೊಂದು ಪಟ್ಟಿ ಶೀಘ್ರವೇ ಬಿಡುಗಡೆ ಆಗಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ. ರಾಜ್ಯ ಮತ್ತು ರಾಷ್ಟ್ರ ನಾಯಕರು ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ: ಸಚಿವ ಸತೀಶ್ ಜಾರಕಿಹೊಳಿ