ಬೆಂಗಳೂರು: ಬಿಟ್ಕಾಯಿನ್ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ವಿಚಾರಣೆ ಎದುರಿಸಿದ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್, "ಪ್ರಕರಣದಲ್ಲಿ ಬಂಧಿತರಾದ ಪ್ರಶಾಂತ್ ಬಾಬು, ಸಂತೋಷ್ ಕರ್ತವ್ಯಲೋಪದ ಕುರಿತು ತಮಗೆ ಮಾಹಿತಿ ಇರಲಿಲ್ಲ ಎಂದು ತನಿಖಾಧಿಕಾರಿಗಳ ಮುಂದೆ ವಿವರಿಸಿದ್ದಾರೆ" ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಬುಲಾವ್ ನೀಡಿದ್ದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ವಿಚಾರಣೆಗಾಗಿ ಸಿಐಡಿ ಕಚೇರಿಗೆ ಹಾಜರಾಗಿದ್ದ ಸಂದೀಪ್ ಪಾಟೀಲ್, ಬಿಟ್ಕಾಯಿನ್ ಹಗರಣ ಕೇಸ್ ಸಂಬಂಧ ಮಾಹಿತಿ ನೀಡಿ ವಾಪಸ್ ತೆರಳಿದ್ದಾರೆ. ಈ ಹಿಂದೆ ಸಂದೀಪ್ ಪಾಟೀಲ್ ಸಿಸಿಬಿಯ ಜಂಟಿ ಆಯುಕ್ತರಾಗಿದ್ದಾಗ ಬಿಟ್ಕಾಯಿನ್ ಅಕ್ರಮದ ಪ್ರಕರಣ ದಾಖಲಾಗಿತ್ತು. ಆದರೆ, ತನಿಖಾ ಕಾಲದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣದ ಹೆಚ್ಚಿನ ತನಿಖೆಯನ್ನು ಸಿಐಡಿ ಎಸ್ಐಟಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು.
ತನಿಖೆಯ ಭಾಗವಾಗಿ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಎಸ್‌ಐಟಿ ಮುಖ್ಯಸ್ಥರಾಗಿರುವ ಮನೀಶ್ ಕರ್ಬಿಕರ್ ನೇತೃತ್ವದಲ್ಲಿ ನಡೆದ ವಿಚಾರಣೆಗೆ ಹಾಜರಾಗಿದ್ದ ಸಂದೀಪ್ ಪಾಟೀಲ್ ತಂಡದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. "ತಮ್ಮ ಅವಧಿಯಲ್ಲಿ ಬಿಟ್ಕಾಯಿನ್ ಪ್ರಕರಣದ ತನಿಖೆಯಲ್ಲಿ ಲೋಪದೋಷಗಳು, ತಾಂತ್ರಿಕ ತೊಂದರೆಗಳಾಗಿಲ್ಲ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಹೇಳಿಕೆ ಆಧರಿಸಿ ಬಿಟ್ಕಾಯಿನ್ಗಳನ್ನು ವಶಕ್ಕೆ ಪಡೆದುಕೊಂಡು, ಸರ್ಕಾರದ ಸುಪರ್ದಿಗೆ ಅಂದೇ ನೀಡಲಾಗಿದೆ. ಆದರೆ ಪ್ರಸ್ತುತ ಎಸ್ಐಟಿಯಿಂದ ಬಂಧಿತರಾದ ಪ್ರಶಾಂತ್ ಬಾಬು, ಸಂತೋಷ್ ಎಸಗಿರುವ ಕರ್ತವ್ಯಲೋಪದ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ತನಿಖಾಧಿಕಾರಿಗಳಿಗೆ ಸಂದೀಪ್ ಪಾಟೀಲ್ ವಿವರಿಸಿದ್ದಾರೆ" ಎಂದು ತಿಳಿದು ಬಂದಿದೆ.
2020ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಸುಜಯ್ ಎಂಬಾತನನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದರು. ತನಿಖೆಯಲ್ಲಿ ಈತ ಡಾರ್ಕ್‌ನೆಟ್‌ನಲ್ಲಿ ಬಿಟ್ಕಾಯಿನ್ ಮೂಲಕ ಡ್ರಗ್ಸ್ ಖರೀದಿಸಿರುವುದು ಗೊತ್ತಾಗಿತ್ತು. ಪ್ರಕರಣದ ಮೂಲ ಪತ್ತೆ ಹಚ್ಚಲು ಹೋದ ಸಂದರ್ಭದಲ್ಲಿ ಬಿಟ್ಕಾಯಿನ್ ಹಗರಣದ ಸೂತ್ರಧಾರ ಶ್ರೀಕಿಯನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಶ್ರೀಕಿಗೆ ಲ್ಯಾಪ್ಟಾಪ್ ಕೊಟ್ಟು ಬಿಟ್ ಕಾಯಿನ್ ವರ್ಗಾವಣೆ ಮಾಡಿಸಿಕೊಂಡ ಬಂಧಿತ ಇನ್ಸ್ಪೆಕ್ಟರ್