ಬೆಂಗಳೂರು: 2024-25ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ಮೇ 20ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಜೂನ್ 6 ರಿಂದ ಆರ್ಟಿಇ ಅಡಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.
ಆರ್ ಟಿ ಇ ಅಡಿ ದಾಖಲಾತಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 22ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಉಪ ನಿರ್ದೇಶಕರಿಂದ ಸ್ವೀಕೃತಗೊಂಡ ಮನವಿಗಳ ಮೇರೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 20ರ ವರೆಗೆ ವಿಸ್ತರಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿರುವುದಾಗಿ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.
ಮೇ 30ರ ವರೆಗೆ ವಿಶೇಷ ಪ್ರವರ್ಗಗಳು ಮತ್ತು ಕ್ರಮಬದ್ದತೆ ಕುರಿತ ಅರ್ಜಿಗಳ ಪರಿಶೀಲನೆ ನಡೆಸಲಿದ್ದು, ಪಟ್ಟಿಯನ್ನು ಅಂತಿಮಗೊಳಿಸಿದ ನಂತರ ಜೂನ್ 1 ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಜೂನ್ 5 ರಂದು ಆನ್ ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಜೂನ್ 6 ರಿಂದ ಶಾಲೆಗಳಲ್ಲಿ ಆರ್ಟಿಇ ಅಡಿ ವಿದ್ಯಾರ್ಥಿಗಳ ದಾಖಲಾತಿ ಪ್ರಾರಂಭಗೊಳ್ಳಲಿದೆ.
ಜೂನ್ 6 ರಿಂದ 14ರ ವರೆಗೆ ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಿದ್ದು, ಜೂನ್ 19 ರಂದು ಆನ್ ಲೈನ್ ತಂತ್ರಾಂಶದ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತದೆ. ಜೂನ್ 20 ರಿಂದ 27 ರ ವರೆಗೆ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಜೂನ್ 28ರ ವರೆಗೆ ಶಾಲೆಗಳಲ್ಲಿ ದಾಖಲಾದ ಎರಡನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಳವಡಿಸಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ:ಎಸ್‌ಎಸ್‌ಎಲ್‌ಸಿ ಟಾಪರ್ ಅಂಕಿತಾಗೆ ₹5 ಲಕ್ಷ, ನವನೀತ್ಗೆ ₹3 ಲಕ್ಷ ನೆರವು ಘೋಷಿಸಿದ ಸಿಎಂ - SSLC Toppers