ಮಂಗಳೂರು: ''ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದಿರುವ ಭಾರಿ ಮಳೆಗೆ ಈವರೆಗೆ 45.28 ಕೋಟಿ ರೂ. ನಷ್ಟ ಸಂಭವಿಸಿದೆ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿ ಇಂದು (ಶನಿವಾರ) ಮಾತನಾಡಿದ ಅವರು, ''ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಇದುವರೆಗೆ 11 ಮಂದಿ ಜೀವ ಕಳೆದುಕೊಂಡಿದ್ದು, 154 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 484 ಮನೆಗಳು ಭಾಗಶಃ ಹಾನಿಯಾಗಿವೆ. 65 ಸೇತುವೆಗಳು ಹಾನಿಗೊಳಗಾಗಿದೆ. ಸದ್ಯ ಜಿಲ್ಲೆಯಲ್ಲಿ 3 ಕಾಳಜಿ ಕೇಂದ್ರಗಳನ್ನು ತೆರೆದಿದ್ದು, 138 ಮಂದಿ ಇದರಲ್ಲಿ ಆಶ್ರಯ ಪಡೆದಿದ್ದಾರೆ'' ಎಂದು ಮಾಹಿತಿ ನೀಡಿದರು.
ಸಂಪೂರ್ಣ ಹಾನಿಯಾದ ಮನೆಗೆ 1.20 ಲಕ್ಷ ರೂ., ಪ.ಜಾತಿ ಪ.ಪಂಗಡಗಳಿಗೆ 1.50 ಲಕ್ಷ ರೂ., ಅನಧಿಕೃತ ಮನೆಗೆ 1 ಲಕ್ಷ ಪರಿಹಾರ ನೀಡಲಾಗುತ್ತದೆ. ಭಾಗಶಃ ಹಾನಿಯಾದ ಮನೆಗೆ 50 ಸಾವಿರ ರೂ., ಉಪಕರಣ ಹಾನಿಗೆ 5 ಸಾವಿರ ಪರಿಹಾರ ನೀಡಲಾಗುತ್ತದೆ. ಹಾನಿಗೊಳಗಾದ 18 ಅಂಗನವಾಡಿಗೆ 37 ಲಕ್ಷ ರೂ., 106 ಶಾಲಾ ದುರಸ್ತಿ 1.94 ಕೋಟಿ ರೂ. ಪರಿಹಾರ ನೀಡಲಾಗುತ್ತದೆ. ಮಳೆ ಹಾನಿಗೆ ತಕ್ಷಣ ಪರಿಹಾರ ನೀಡಲು ಗ್ರಾಮ ಪಂಚಾಯತ್‌ಗಳಿಗೂ ಅನುದಾನ ನೀಡಲಾಗುತ್ತದೆ. ಸದ್ಯ 20 ಕೋಟಿಯಷ್ಟು ಪ್ರಕೃತಿ ವಿಕೋಪ ನಿರ್ವಹಣೆಗೆ ಹಣ ಜಿಲ್ಲಾಡಳಿತದಲ್ಲಿದೆ'' ಎಂದು ತಿಳಿಸಿದರು.
''ಅದ್ಯಪಾಡಿ ಕೃತಕ ನೆರೆ, ಕೆತ್ತಿಕಲ್ ಗುಡ್ಡ ಅಗತ್ಯ ಪರಿಹಾರ ಕಂಡು ಹಿಡಿಯಲು ಟೆಕ್ನಿಕಲ್ ತಂಡ ರಚನೆ ಮಾಡಲಾಗುತ್ತದೆ. ತಜ್ಞರ ತಂಡದಿಂದಲೂ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಕೆತ್ತಿಕಲ್ಲುವಿನಲ್ಲಿ ಈ ಮಟ್ಟಕ್ಕೆ ಅಗೆದಿರುವ ಬಗ್ಗೆ ತನಗೆ ಮಾಹಿತಿ ಇರಲಿಲ್ಲ. ಕೆತ್ತಿಕಲ್ಲು ಬಗ್ಗೆ ಎಲ್ಲರ ನಿರ್ಲಕ್ಷ್ಯ ಇದೆ. ಪರಿಸರ ಮೇಲೆ ಆಗುವ ಒತ್ತಡವೂ ದುರಂತಕ್ಕೆ ಕಾರಣ. ಅಭಿವೃದ್ಧಿ ಸಮತೋಲನದ ಬಗ್ಗೆ ಯೋಚನೆ ಮಾಡಬೇಕಾಗಿದೆ. ಇದೇ ರೀತಿ ಮುಂದುವರೆದಲ್ಲಿ ಅನಾಹುತ ಹೆಚ್ಚಾಗುತ್ತದೆ. ಅಭಿವೃದ್ಧಿ ಯೋಜನೆಯಲ್ಲಿ ದೀರ್ಘಾವಧಿಯಲ್ಲಿ ದೊಡ್ಡ ಆತಂಕ ಬರಬಹುದು'' ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇದನ್ನೂ ಓದಿ: ಡಾಂಬರ್ ರಸ್ತೆ ಕಣ್ಮರೆ, ಮನೆ ಮೇಲೆ ಅಪ್ಪಳಿಸಿದ ಗುಡ್ಡ: ಕಳಸ, ಸಂಸೆಯಲ್ಲಿ ಮಳೆ ಸಂಬಂಧಿ ಅವಘಡಗಳು - Chikkamagaluru Rain