ಮೈಸೂರು: ಐತಿಹಾಸಿಕ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನಕ್ಕೆ ಭಕ್ತಾದಿಗಳು ಒಂದೇ ತಿಂಗಳಲ್ಲಿ ₹1.69 ಕೋಟಿ ಹಾಗೂ ಚಿನ್ನಾಭರಣವನ್ನು ಕಾಣಿಕೆಯಾಗಿ ನೀಡಿದ್ದಾರೆ.
ಮಂಗಳವಾರ ದೇವಾಲಯದ 35 ಹುಂಡಿಗಳನ್ನು ಬೆಳಗ್ಗೆ ತೆರೆಯಲಾಯಿತು. ಹುಂಡಿಯಲ್ಲಿ ₹1,69,69,867 ನಗದು, 134 ಗ್ರಾಂ ಚಿನ್ನ, 2.350 ಕೆಜಿ ಬೆಳ್ಳಿ, 23 ವಿದೇಶಿ ಕರೆನ್ಸಿಗಳು ಸಿಕ್ಕಿವೆ. ದೇವಾಲಯದ ದಾಸೋಹ ಭವನದಲ್ಲಿ, ದೇವಸ್ಥಾನದ ಸಿಬ್ಬಂದಿ, ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ಹಾಗೂ ಸ್ವಸಹಾಯ ಸಂಘದ ನೂರಕ್ಕೂ ಹೆಚ್ಚು ಮಹಿಳಾ ಸದಸ್ಯರು ಮಂಗಳವಾರ ಬೆಳಗ್ಗೆಯಿಂದ ಸಂಜೆ ತನಕ ಹುಂಡಿಯಲ್ಲಿರುವ ಹಣ, ಚಿನ್ನಾಭರಣವನ್ನು ಎಣಿಕೆ ಮಾಡಿದರು.
ಈ ವೇಳೆಯಲ್ಲಿ ನಂಜುಂಡೇಶ್ವರ ದೇವಸ್ಥಾನದ ಕಾರ್ಯನಿರ್ವಾಧಿಕಾರಿ ಜಗದೀಶ್ ಕುಮಾರ್ ತಹಶೀಲ್ದಾರ್ ವಿದ್ಯುಲತಾ, ಎಇಒ ಸತೀಶ್, ಲೆಕ್ಕಾಧಿಕಾರಿ ಗುರುಮಲ್ಲಯ್ಯ, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಟಿ.ಕೆ. ನಾಯಕ್ ಇದ್ದರು.
ಇತ್ತೀಚಿನ ಮಾಹಿತಿ: ಕೋಟಿಗೂ ಅಧಿಕ ಮೊತ್ತದ ಕಾಣಿಕೆ: ಕಳೆದ ಏಪ್ರಿಲ್ ತಿಂಗಳಿನಲ್ಲಿ ನಂಜುಂಡೇಶ್ವರನಿಗೆ 1.72 ಕೋಟಿ ರೂಪಾಯಿ ಕಾಣಿಕೆಯನ್ನು ಭಕ್ತಾದಿಗಳು ನೀಡಿದ್ದರು. ನಂಜುಂಡೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದ ಆವರಣದಲ್ಲಿ ಹುಂಡಿ ಎಣಿಕೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ₹1,72,85,296 ಕಾಣಿಕೆ ಸಂಗ್ರಹವಾಗಿದ್ದು, ಇದರೊಂದಿಗೆ 92 ಗ್ರಾಂ ಚಿನ್ನಾಭರಣ, 3 ಕೆಜಿ 500 ಗ್ರಾಂ ಬೆಳ್ಳಿ, ಮತ್ತು 33 ವಿದೇಶಿ ಕರೆನ್ಸಿಗಳು ದೊರೆತಿದ್ದವು. ಹುಣ್ಣಿಮೆ ಸೇರಿದಂತೆ ವಿಶೇಷ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರಿಂದ ಹುಂಡಿಯಲ್ಲಿ ಈ ಪ್ರಮಾಣದ ಮೊತ್ತ ಸಂಗ್ರಹವಾಗಿದೆ.
ಎಣಿಕೆ ಕಾರ್ಯದಲ್ಲಿ ನಂಜುಂಡೇಶ್ವರ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಹಾಗೂ ವೆಂಕಟೇಶ್ ಪ್ರಸಾದ್, ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್ ವಿದುಲತಾ ಮತ್ತು ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಕಾರ್ತಿಕ್ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು ಪಾಲ್ಗೊಂಡಿದ್ದರು.