ಕೋಲಾರ : ಕೋಲಾರ ತಾಲೂಕು ಛತ್ರಕೋಡಿಹಳ್ಳಿ ಗ್ರಾಮದ ಮುನೇಗೌಡ ಅವರ ಗುಲಾಬಿ ತೋಟದಲ್ಲಿ ತಾಜ್ಮಹಲ್ ತಳಿಯ ಚೆಂದದ ಗುಲಾಬಿ ಹೂವುಗಳು ಅರಳಿ ನಿಂತಿವೆ. ಪ್ರತಿವರ್ಷ ಫೆಬ್ರವರಿ ಬಂತಂದ್ರೆ ಸಾಕು ಗುಲಾಬಿ ಹೂವಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚುತ್ತೆ. ಅದರಲ್ಲೂ ನಮ್ಮ ದೇಶಕ್ಕಿಂತ ಬೇರೆ ದೇಶಗಳಲ್ಲೇ ಇದಕ್ಕೆ ಡಿಮ್ಯಾಂಡ್ ಜಾಸ್ತಿ ಇರುತ್ತದೆ.
ಬರದ ನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕೋಲಾರ ಜಿಲ್ಲೆಯಲ್ಲೂ ಹಲವು ರೈತರು ಗುಲಾಬಿ ಬೆಳೆದಿದ್ದಾರೆ. ತಾಜ್ಮಹಲ್, ಗೋಸ್ಟ್ರೈಕ್, ಅವಲಂಚ್ ವೈಟ್, ಸೇರಿದಂತೆ ಹಲವು ಬಗೆಯ ಗುಲಾಬಿ ಹೂಗಳನ್ನು ಆಸ್ಟ್ರೇಲಿಯಾ, ಜಪಾನ್, ಸಿಂಗಾಪುರ, ಮಲೇಷ್ಯಾ ದೇಶಗಳಿಗೆ ರಫ್ತು ಮಾಡ್ತಾರೆ.
ವರ್ಷ ಪೂರ್ತಿ ತಾಜ್ಮಹಲ್ ಗುಲಾಬಿ ಹೂವಿಗೆ ಬೇಡಿಕೆ ಇರುತ್ತದೆ. ಹೊಸವರ್ಷ ಹಾಗೂ ವ್ಯಾಲೆಂಟೈನ್ಸ್ ಡೇ ಬಂದ್ರೆ ಸಾಕು ಹೂವಿಗೂ ಬೇಡಿಕೆ ಹೆಚ್ಚು. ಜೊತೆಗೆ ಒಳ್ಳೆಯ ಬೆಲೆಯೂ ಸಿಗುತ್ತದೆ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಹೂವುಗಳ ಭರಾಟೆ ಜೋರಾಗಿರುವ ಹಿನ್ನೆಲೆ ಗುಲಾಬಿ ಹೂವಿಗೆ ನಾವು ನಿರೀಕ್ಷಿಸಿದಷ್ಟು ಬೆಲೆ ಸಿಗುತ್ತಿಲ್ಲ ಅನ್ನೋದು ಗುಲಾಬಿ ಹೂವು ಬೆಳೆದವರ ಬೇಸರದ ಮಾತು.
ಕೋಲಾರದಂತ ಬಯಲು ಸೀಮೆ ಜಿಲ್ಲೆಯಲ್ಲಿ ನೀರಿಲ್ಲದ ಪರಿಸ್ಥಿತಿಯಲ್ಲಿ ಗುಲಾಬಿ ಹೂವನ್ನು ಬೆಳೆಯೋದು ಅಷ್ಟು ಸುಲಭದ ಮಾತಲ್ಲ. ಅದು ನಿಜಕ್ಕೂ ಸವಾಲಿನ ವಿಷಯ. ಇಂಥ ಪರಿಸ್ಥಿತಿಯಲ್ಲಿ ಸುಮಾರು 20 ವರ್ಷಗಳಿಂದ ಐದು ಎಕರೆ ಪ್ರದೇಶದಲ್ಲಿ ಗುಲಾಬಿ ಹೂ ಬೆಳೆಯುವ ಮೂಲಕ ಇಲ್ಲೊಬ್ಬರು ಇತರ ರೈತರಿಗೆ ಮಾದರಿಯಾಗಿದ್ದಾರೆ. ಜೊತೆಗೆ ತಮ್ಮ ಶ್ರಮಕ್ಕೂ, ನಿರೀಕ್ಷೆಗೂ ಮೀರಿದ ಲಾಭವನ್ನು ಅವರು ಗಳಿಸಿದ್ದಾರೆ.
ರೈತರ ಬದುಕನ್ನು ಹಸನಾಗಿಸಿದ ಗುಲಾಬಿ: ''ಗುಲಾಬಿಯನ್ನು ನಂಬಿದವರಿಗೆ ಅದು ಎಂದಿಗೂ ಮೋಸ ಮಾಡೋದಿಲ್ಲ. ಅತ್ತ ಪ್ರೇಮಿಗೆ ಪ್ರೀತಿಯ ನಿವೇದನೆಗೆ ಬೆಂಬಲ ನೀಡುವಂತೆ, ಕಷ್ಟಪಟ್ಟು ಗುಲಾಬಿ ಬೆಳೆದ ರೈತನ ಬದುಕನ್ನು ಕೂಡಾ ಗುಲಾಬಿ ಹಸನಾಗಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಅಷ್ಟೊಂದು ಬೆಲೆ ಸಿಗುತ್ತಿಲ್ಲ. ಒಂದು ಗುಲಾಬಿ ಹೂವು ಕಳೆದ ವರ್ಷ 18 ರಿಂದ 25 ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ಆದರೆ ಈ ವರ್ಷ ಒಂದು ಗುಲಾಬಿ ಹೂವು 12 ರಿಂದ 14 ರೂಪಾಯಿಗೆ ಮಾರಾಟವಾಗುತ್ತಿದೆ. ಸದ್ಯ ಕೆಲಸದವರ ಕೊರತೆ, ಮಳೆ ಕೊರತೆ, ರಸಗೊಬ್ಬರ ಹಾಗೂ ಕೀಟನಾಶಕಗಳ ಬೆಲೆ ಏರಿಕೆ ನಡುವೆ ಹೂವು ಬೆಳೆಗಾರರಿಗೆ ಕನಿಷ್ಠ ಲಾಭ ಸಿಗುತ್ತಿದೆ. ಹಾಗಾಗಿ ಪ್ಲಾಸ್ಟಿಕ್, ಆರ್ಟಿಫಿಷಿಯಲ್ ಹೂವುಗಳ ಬಳಕೆ ಕಡಿಮೆ ಮಾಡಿದ್ರೆ ಪರಿಸರಕ್ಕೂ ಒಳ್ಳೆಯದು, ರೈತರಿಗೂ ಒಳ್ಳೆಯದು'' ಎಂದು ಬೆಳೆಗಾರರಾದ ಮುನೇಗೌಡ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್... ಬಡ ರೈತನ ಆದಾಯ ಅರಳಿಸಿದ ಗುಲಾಬಿ