ಗಂಗಾವತಿ: ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಹಿಂದೂ ದೇವಾಲಯಗಳನ್ನು ಆಯಾ ಪ್ರದೇಶದ ಹಿಂದೂಗಳ ಆಡಳಿತಕ್ಕೆ ನೀಡಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಈ ಬಗ್ಗೆ ಮಾತನಾಡಿ, ದೇಶದ ಬಹುತೇಕ ಪ್ರಾರ್ಥನಾ ಮಂದಿರಗಳನ್ನು ಆಯಾ ಸಮುದಾಯಕ್ಕೆ ಬಿಟ್ಟುಕೊಡಲಾಗಿದೆ. ಆದರೆ, ಹಿಂದೂ ದೇವಾಲಯಗಳ ಆಡಳಿ ಮಾತ್ರ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸರ್ಕಾರ ನಿಯಂತ್ರಿಸುತ್ತಿದೆ. ಇದು ಸರಿಯಲ್ಲ. ಆಯಾ ಧರ್ಮದ ವ್ಯಾಪ್ತಿಗೆ ಆಯಾ ದೇಗುಲಗಳ ಆಡಳಿತ ನೀಡುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶ ಇದೆ. ಆದರೆ, ಸರ್ಕಾರಗಳು ಎಲ್ಲಿಯೂ ಈ ಆದೇಶವನ್ನು ಜಾರಿಗೆ ತರುತ್ತಿಲ್ಲ. ಈ ಕಾರ್ಯ ತಕ್ಷಣದಿಂದ ಆಗಬೇಕು ಎಂದರು.
ಐಎಎಸ್ನಂತಹ ಪರೀಕ್ಷೆಯಲ್ಲಿ ದಲಿತರು ಹಿಂದುಳಿಯಲು ಅಥವಾ ಆಯಕಟ್ಟಿನ ಹುದ್ದೆಗೆ ಆಯ್ಕೆ ಹೊಂದದಿರಲು ಮುಖ್ಯ ಕಾರಣ ಮೇಲ್ವರ್ಗದವರು ಎಂಬ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಇದೊಂದು ಆಧಾರರಹಿತ ಆರೋಪ. ಪರೀಕ್ಷೆಗಳು ಎಲ್ಲರಿಗೂ ಒಂದೇ ಇರುತ್ತದೆ. ಎಲ್ಲರಿಗೂ ನೂರು ಅಂಕ ಇರುತ್ತದೆ. ಅಭ್ಯರ್ಥಿಗಳು ಗ್ರಹಿಸುವ ಸಾಮರ್ಥ್ಯದ ಮೇಲೆ ಅಂಕಗಳು ಸಿಗುತ್ತವೆಯೇ ವಿನಃ, ಮೇಲ್ವರ್ಗ ಮತ್ತು ಕೆಳವರ್ಗ ಎಂಬ ತಾರತಮ್ಯ ನೀತಿಯಿಂದಲ್ಲ ಎಂದು ಹೇಳಿದರು.
ದೇಶದಲ್ಲಿ ಹಿಂದೂಗಳ ಸಂಖ್ಯೆ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಶ್ರೀಗಳು, ದೇಶದಲ್ಲಿ ಸಮಾನ ನಾಗರಿಕ ಕಾಯ್ದೆ ಜಾರಿಯಾದರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆದಷ್ಟು ತ್ವರಿತವಾಗಿ ಮಸೂದೆ ಮಂಡನೆಯಾಗಿ ಕಾಯ್ದೆ ಜಾರಿಯಾಗಬೇಕು ಎಂದರು.
ರಾಮಮಂದಿರ ಸವಾಲು: ಐದಾರು ಶತಮಾನಗಳ ಮಂದಿರ ನಿರ್ಮಾಣ ಕನಸು ಇಂದು ನನಸಾಗಿದೆ. ಇಲ್ಲಿಗೆ ನಮ್ಮ ಕಾರ್ಯ ಮುಗೀತು ಎಂದು ಸುಮ್ಮನೆ ಕೂರುವ ಹಾಗಿಲ್ಲ. ಮಂದಿರ ನಿರ್ಮಾಣ ಮಾಡಿದ್ದು ದೊಡ್ಡ ಕಾರ್ಯವಲ್ಲ. ಆದರೆ, ಆ ಮಂದಿರವನ್ನು ಸೂರ್ಯ-ಚಂದ್ರರು ಇರೋವರೆಗೂ ಉಳಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ಮಂದಿರದ ಮೇಲೆ ಯಾವುದೇ ದಾಳಿಯಾಗದಂತೆ, ಧಕ್ಕೆಯಾಗದಂತೆ ಸಂರಕ್ಷಣೆ ಮಾಡಿಕೊಂಡು ಹೋಗುವ ಕೆಲಸವನ್ನು ಪ್ರತಿಯೊಬ್ಬ ಭಾರತೀಯ, ಅದರಲ್ಲೂ ಮುಖ್ಯವಾಗಿ ಪ್ರತಿಯೊಬ್ಬ ಹಿಂದೂ ಈ ಕೆಲಸ ಮಾಡಬೇಕು. ಹಿಂದೂಗಳು ಹಿಂದೂಗಳಾಗಿ ಉಳಿದರೆ ಮಾತ್ರ ಈ ಕೆಲಸ ಸಾಧ್ಯ ಎಂದು ಶ್ರೀಗಳು ಹೇಳಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ರಾಮಮಂದಿರದ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂಬ ವದಂತಿ ಸಾರ್ವಜನಿಕ ವಲಯದಲ್ಲಿ ಹಬ್ಬುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ರಾಮಮಂದಿರ ಕೇಂದ್ರ ಸರ್ಕಾರ ನಿರ್ಮಾಣ ಮಾಡಿದ್ದಲ್ಲ. ಈ ದೇಶದ ಪ್ರತಿಯೊಬ್ಬ ಪ್ರಜೆಗಳು ಧರ್ಮಾತೀತರಾಗಿ ದೇಣಿಗೆ ನೀಡಿದ್ದಾರೆ. ದೇಶದ ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶದ ಮೇರೆಗೆ ಮಂದಿರ ನಿರ್ಮಾಣ ಮಾಡಲಾಗಿದೆ. ಮಂದಿರಕ್ಕೆ ಧಕ್ಕೆ ತರುವ ಮಾತು ಯಾರು ಆಡುತ್ತಾರೋ ಅಂಥವರಿಂದ ನ್ಯಾಯಾಲಯ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದಂತಾಗಲಿದ ಎಂದರು.
ಇದನ್ನೂ ಓದಿ: 'ರಾಮಲಲ್ಲಾ' ಪ್ರಾಣ ಪ್ರತಿಷ್ಠಾಪನೆ: ದೇಶಾದ್ಯಂತ ಪ್ರಜ್ವಲಿಸಿದ 'ರಾಮಜ್ಯೋತಿ' - ಫೋಟೋಗಳಿಲ್ಲಿವೆ