ದಾವಣಗೆರೆ: ನಿವೃತ್ತ ಶಿಕ್ಷಕಿ ಪದ್ಮಾವತಿ ಅವರು ಕಳೆದ 34 ವರ್ಷಗಳಲ್ಲಿ 298 ಬಾರಿ ವಿಧಾನ ಸೌಧಕ್ಕೆ ಭೇಟಿ ಕೊಟ್ಟಿದ್ದಾರೆ. ತಮ್ಮ ಹಣಕ್ಕಾಗಿ ಇಂದಿಗೂ ಕೂಡ ವಿಧಾನಸೌಧ, ದಾವಣಗೆರೆ ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಕಚೇರಿ ಸುತ್ತು ಹಾಕುತ್ತಲೇ ಇದ್ದಾರೆ. ದುರಂತ ಎಂದರೇ ಇವರಿಗೆ 11 ವರ್ಷಗಳು ಸೇವೆ ಸಲ್ಲಿಸಿದ ವೇತನ ಹಾಗೂ ನಿವೃತ್ತಿ ವೇತನ ರೂಪದಲ್ಲಿ ಪರಿಹಾರವನ್ನು ವಿದ್ಯಾಸಂಸ್ಥೆಯಿಂದ ಕೊಡಿಸುವಂತೆ ಶಿಕ್ಷಣ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದ್ದರೂ ಇವರಿಗೆ ಸೇರಬೇಕಾದ ಹಣ ಮಾತ್ರ ತಲುಪಿಲ್ಲ.
ಪದ್ಮಾವತಿ ಅವರು ಸೂಕ್ತ ಪರಿಹಾರಕ್ಕಾಗಿ ದಾವಣಗೆರೆ ಜಿಲ್ಲಾ ನ್ಯಾಯಾಲಯ, ನಂತರ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಲಯಗಳು ಸೂಕ್ತ ಪರಿಹಾರ ಕೊಡಿಸಿ ಎಂದು ಆದೇಶ ಹೊರಡಿಸಿದರೂ ಬಡ ನಿವೃತ್ತ ಶಿಕ್ಷಕಿಗೆ ನ್ಯಾಯ ಸಿಕ್ಕಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ನಿವೃತ್ತ ಶಿಕ್ಷಕಿ ಹೇಳುವುದೇನು?: "ದಾವಣಗೆರೆ ತಾಲೂಕಿನ ರಾಂಪೂರ ಗ್ರಾಮದ ಆರ್.ಜಿ.ನಂಜಪ್ಪ ಅನುದಾನಿತ ಪ್ರೌಢ ಶಾಲೆಯಲ್ಲಿ 1984ರಿಂದ 1986ರ ತನಕ ಅರೆಕಾಲಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದೇನೆ. 1993ರ ಬಳಿಕ ಪೂರ್ಣಕಾಲಿಕ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ. ಒಟ್ಟು 11 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಸೇವೆ ಸಲ್ಲಿಸಿದ ವೇತನ ಹಾಗೂ ನಿವೃತ್ತಿ ವೇತನ ರೂಪದಲ್ಲಿ ಪರಿಹಾರ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದೆ. ಲಕ್ಷಾಂತರ ರೂಪಾಯಿ ಪೆನ್ಷನ್ ಸೇರಿ ವೇತನ ಬರಬೇಕು. ಅರೆಕಾಲಿಕ ಸೇವೆ ಮಾಡಿದ್ದರ ವೇತನ ಬಂದಿದೆ. 1986 ರಿಂದ ಈಚೆಗೆ ಪಿಂಚಣಿ ಕೊಡಬೇಕೆಂದು ಹೇಳಲಾಗಿದೆ. ಆದರೆ ಅದನ್ನು ಕೊಟ್ಟಿಲ್ಲ. ಐದಾರು ಸಚಿವರು ಬದಲಾದರೂ ಸಮಸ್ಯೆ ಬಗೆಹರಿದಿಲ್ಲ" ಎಂದು ದುಃಖ ತೋಡಿಕೊಂಡರು.
ಡಿಡಿಪಿಐ ಕೊಟ್ರೇಶ್ ಹೇಳುವುದೇನು?: "ಪದ್ಮಾವತಿಯವರಿಗೆ 1983ರಲ್ಲಿ ವಿದ್ಯಾರ್ಹತೆ ಇಲ್ಲ. ಅವರ ಕೆಲಸ ಸರ್ಕಾರ ಅನುಮೋದನೆ ಮಾಡಿದ್ದಿಲ್ಲ. ಆಗ ಡಿಡಿಪಿಐ ಕಚೇರಿ ಚಿತ್ರದುರ್ಗ ಜಿಲ್ಲೆಯಲ್ಲಿತ್ತು. ಹೇಗೆ ಪಿಂಚಣಿ ಕೊಡಲು ಬರುತ್ತದೆ? ಈಗಾಗಲೇ ಅವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಅವರು ತಾತ್ಕಾಲಿಕವಾಗಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಕ್ಕಾಗಿ ಏನು ಕೊಡ್ಬೇಕಾಗಿತ್ತೋ ಅದನ್ನು ಕೊಡಲಾಗಿದೆ" ಎಂದು ಡಿಡಿಪಿಐ ಕೊಟ್ರೇಶ್ ತಿಳಿಸಿದರು.
ಇದನ್ನೂ ಓದಿ: ಆನೆ ದಾಳಿ: ಮೃತ ಅರಣ್ಯ ಸಿಬ್ಬಂದಿ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಿಸಿದ ಸಚಿವ ಈಶ್ವರ್ ಖಂಡ್ರೆ - Eshwar Khandre