ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಅಧ್ಯಕ್ಷ - ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.
61 ನಗರಸಭೆ, 123 ಪುರಸಭೆ ಹಾಗೂ 117 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ. 61 ನಗರ ಸಭೆಗಳಲ್ಲಿನ ಅಧ್ಯಕ್ಷ ಹುದ್ದೆಗಳ ಪೈಕಿ 16ನ್ನು ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ. ಇನ್ನು 15 ಅಧ್ಯಕ್ಷ ಹುದ್ದೆಗಳನ್ನು ಸಾಮಾನ್ಯ ಮಹಿಳೆಯರಿಗೆ ಮೀಸಲು ಮಾಡಲಾಗಿದೆ.
5 ಎಸ್ಸಿ ಮೀಸಲಾತಿ ನೀಡಲಾಗಿದ್ದರೆ, 5 ಎಸ್ಸಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ. 2 ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದರೆ, 2 ಎಸ್ಟಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ.
ಇದನ್ನೂ ಓದಿ: ಬಡ್ತಿ ನಿರಾಕರಿಸಿದ 250ಕ್ಕೂ ಹೆಚ್ಚು ಪೊಲೀಸ್ ಕಾನ್ಸ್ಟೇಬಲ್ಗಳು: ಕಾರಣ ಇದು! - Police Constables Promotion
ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲು ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಯ್ಯದ್ ನಸ್ರುಲ್ಲಾ ಸೇರಿದಂತೆ ಚಿತ್ರದುರ್ಗ, ಬನ್ನೂರು ಮತ್ತು ಕುಶಾಲನಗರ ಸ್ಥಳೀಯ ಸಂಸ್ಥೆಗಳ ಇತರೆ ಚುನಾಯಿತಿ ಪ್ರತಿನಿಧಿಗಳು ಸಲ್ಲಿಸಿದ್ದ ತಕರಾರು ಅರ್ಜಿ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ಮುಂದೆ ವಿಚಾರಣೆಗೆ ಬಂದಿತ್ತು.
ಸರ್ಕಾರದ ಪರ ಹಾಜರಾದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ಮೀಸಲು ನಿಗದಿಪಡಿಸಿ ಹೊರಡಿಸಿರುವ ಗೆಜೆಟ್ ಅಧಿಸೂಚನೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಅಲ್ಲದೆ, ರಾಜ್ಯದ 117 ಪಟ್ಟಣ ಪಂಚಾಯಿತಿ, 123 ಪುರಸಭೆ ಮತ್ತು 61 ನಗರಸಭೆಗಳ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿವರಿಸಿದರು.
ಅರ್ಜಿದಾರರ ಪರ ಹಾಜರಿದ್ದ ವಕೀಲ ಎ.ಮೊಹಮ್ಮದ್ ತಾಹಿರ್, ಚುನಾವಣೆ ಸಮಯ ಮೀರಿ ವರ್ಷ ಕಳೆದರೂ ಮೀಸಲಾತಿ ಪ್ರಕಟ ಮಾಡಿರಲಿಲ್ಲ. ಇದೀಗ ಮೀಸಲು ಪ್ರಕಟಿಸಲಾಗಿದೆ. ಆದರೆ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಯಾವಾಗ ಚುನಾವಣೆ ನಡೆಸಲಾಗುತ್ತದೆ ಎಂಬುದನ್ನು ಅಧಿಸೂಚನೆಯಲ್ಲಿ ತಿಳಿಸಿಲ್ಲ. ಈ ವಿಚಾರವನ್ನು ಕೋರ್ಟ್‌ಗೆ ಸರ್ಕಾರ ಖಚಿತಪಡಿಸಬೇಕಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಯಾವಾಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಆ.9ರಂದು ಮಾಹಿತಿ ನೀಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.