ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆಯನ್ನ 57ನೇ ಸಿಸಿಹೆಚ್ ನ್ಯಾಯಾಲಯ ನಾಳೆಗೆ(ಬುಧವಾರ) ಮುಂದೂಡಿದೆ. ಹತ್ಯೆ ಪ್ರಕರಣದಲ್ಲಿ ತನಿಖೆ ಮುಕ್ತಾಯವಾಗಿದ್ದು, ಜಾಮೀನು ಪುರಸ್ಕರಿಸಬೇಕೆಂದು ಕೋರಿ ಪವಿತ್ರಾ ಗೌಡ ಪರ ಹಿರಿಯ ವಕೀಲೆ ಟಾಮಿ ಸೆಬಾಸ್ಟಿಯನ್ ಸಲ್ಲಿಸಿದ್ದ ಅರ್ಜಿಯನ್ನ ವಿಚಾರಣೆ ನಡೆಸಿತು. ಇದಕ್ಕೂ ಮುನ್ನ ಪೊಲೀಸರ ಪರ ವಕೀಲರು ಜಾಮೀನು ಅರ್ಜಿ ರದ್ದು ಮಾಡುವಂತೆ ಆಕ್ಷೇಪಣೆ ಸಲ್ಲಿಸಿತು.
ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ(A1) ಪವಿತ್ರಾ ಗೌಡ, ರೇಣುಕಾಸ್ವಾಮಿ ಹತ್ಯೆ ಷಡ್ಯಂತ್ರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಅಕ್ರಮವಾಗಿ ರೇಣುಕಸ್ವಾಮಿಯನ್ನ ಪಟ್ಟಣಗೆರೆ ಶೆಡ್ನಲ್ಲಿ ಕರೆತಂದಾಗ ಸ್ಥಳಕ್ಕೆ ಹೋಗಿ ಚಪ್ಪಲಿಯಿಂದ ಪವಿತ್ರಾ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿದೆ. ವ್ಯವಸ್ಥಿತವಾಗಿ ಸಂಚು ರೂಪಿಸುವಲ್ಲಿ ಪವಿತ್ರಾ ಪಾತ್ರ ದೊಡ್ಡದಾಗಿದೆ. ಪ್ರಕರಣವು ತನಿಖೆ ಹಂತದಲ್ಲಿದ್ದು, ಚಾರ್ಜ್ಶೀಟ್ ಕೂಡ ಸಲ್ಲಿಕೆಯಾಗಿಲ್ಲ. ಅಲ್ಲಿವರೆಗೂ ಜಾಮೀನು ಅರ್ಜಿ ಪುರಸ್ಕರಿಸಬಾರದು ಎಂದು ಆಕ್ಷೇಪಣೆಯಲ್ಲಿ ವಕೀಲರು ತಿಳಿಸಿದ್ದರು.
ವಾದ ಮಂಡಿಸಿದ ಟಾಮಿ ಸೆಬಾಸ್ಟಿಯನ್, ಹತ್ಯೆ ಪ್ರಕರಣ ಮೊದಲಿಗೆ ಅಪರಿಚಿತ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಬಳಿಕ ನಾಲ್ವರು ಪೊಲೀಸರ ಮುಂದೆ ಶರಣಾಗತಿಯಾಗಿದ್ದರು. ಎರಡನೇ ಆರೊಪಿ ದರ್ಶನ್ ಹಾಗೂ ಮೂರನೇ ಆರೋಪಿ ಪವನ್ ನಡುವೆ ಎರಡನೇ ಹಂತದ ಒಳಸಂಚು ರೂಪಿಸಿದ್ದಾರೆ. ಮೃತನ ಮನೆ ವಿಳಾಸ ಪತ್ತೆ ದರ್ಶನ್ಗೆ ಪವನ್ ನೀಡಿದ್ದ. ಸೂಚನೆ ಮೇರೆಗೆ ರಾಘವೇಂದ್ರ ಅಂಡ್ ಟೀಮ್ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಅಪಹರಿಸಿದ್ದಾರೆ. ಮಾರ್ಗಮಧ್ಯೆ ಚಿನ್ನಾಭರಣ ದೋಚಿದ್ದಾರೆ. ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿದ್ದ ದರ್ಶನ್ಗೆ ಕರೆ ಮಾಡಿ ರೇಣುಕಾಸ್ವಾಮಿಯನ್ನ ಕರೆತಂದಿರುವ ಮಾಹಿತಿಯನ್ನು ಪವನ್ ನೀಡಿದ್ದರು.
ಹತ್ಯೆ ಪ್ರಕರಣದಲ್ಲಿ ಎಲ್ಲಿಯೂ ಪವಿತ್ರಾ ಗೌಡ ಬಾಗಿಯಾಗಿಲ್ಲ. ಆರೋಪಿತ ಸ್ಥಾನದಲ್ಲಿರುವವರ ಅಪ್ರಾಪ್ತರು, ಮಹಿಳೆಯರು ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಿಆರ್ಪಿಸಿ ಸೆಕ್ಷನ್ ನಡಿ 437ನಂತೆ ಕಾನೂನಾತ್ಮಕ ವಿನಾಯಿತಿ ನೀಡಿರುವ ಬಗ್ಗೆ ದೇಶದ ವಿವಿಧ ನ್ಯಾಯಾಲಯಗಳು ಮಾನ್ಯ ಮಾಡಿವೆ. ಹತ್ಯೆಯಾದ 15 ದಿನದೊಳಗಾಗಿ ಪವಿತ್ರಾ ಗೌಡ ಅವರ ತನಿಖೆ ಮುಕ್ತಾಯಗೊಳಿಸಿದ್ದಾರೆ. ಹೀಗಾಗಿ ಜಾಮೀನು ಅರ್ಜಿ ಪುರಸ್ಕರಿಸಬೇಕೆಂದು ಮನವಿ ಮಾಡಿದರು. ಇದೇ ವೇಳೆ ಪ್ರಕರಣದ 16ನೇ ಆರೋಪಿ ಕೇಶವಮೂರ್ತಿ ಪರ ವಕೀಲ ರಂಗನಾಥ ರೆಡ್ಡಿ, ಜಾಮೀನು ಮಂಜೂರು ಮಾಡಬೇಕೆಂದು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ನಾಳೆ ಮಧ್ಯಾಹ್ನ 2.45ಕ್ಕೆ ವಿಚಾರಣೆಯನ್ನ ಮುಂದೂಡಿತು.
ಓದಿ: ಬಳ್ಳಾರಿ ಜೈಲಿಗೆ ನಟ ದರ್ಶನ್ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನಿಸಲಿದೆ: ಸಿಎಂ - Darshan Jail Issue