ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ನಾಲ್ವರಿಗೆ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಆ ಬಳಿಕ ಆರೋಪಿಗಳನ್ನು ಕೋರ್ಟ್ನಿಂದ ಪರಪ್ಪನ ಅಗ್ರಹಾರ ಜೈಲಿಗೆ ಕರೆತರಲಾಗಿದೆ.
ಪರಪ್ಪನ ಅಗ್ರಹಾರ ಸೇರಿದ ಆರೋಪಿಗಳಿಗೆ ವಿಚಾರಣಾಧೀನ ಕೈದಿ ಸಂಖ್ಯೆಯನ್ನು ಕೂಡ ನೀಡಲಾಗಿದೆ. ದರ್ಶನ್ ಅವರ ವಿಚಾರಣಾಧೀಕ ಕೈದಿ ಸಂಖೆ 6106 ಆಗಿದೆ. ಹಾಗೆಯೇ ಇತರೆ ಆರೋಪಿಗಳಾದ ಧನರಾಜ್ - 6107, ವಿನಯ್ - 6108 ಹಾಗೂ ಪ್ರದೂಶ್ - 6109 ಯುಟಿಪಿ ಸಂಖ್ಯೆ ನೀಡಲಾಗಿದೆ.
ಪ್ರಕರಣದಲ್ಲಿ ಬಂಧಿತರಾಗಿ ಜೈಲುಪಾಲಾಗಿರುವ ಸಹ ಆರೋಪಿಗಳ ಮೇಲೆ ದರ್ಶನ್ ಬಗ್ಗೆ ಅಭಿಮಾನವಿರುವ ವಿಚಾರಣಾಧೀನ ಕೈದಿಗಳು ಹಲ್ಲೆ ಮಾಡುವ ಸಾಧ್ಯತೆಯಿದೆ. ಕೆಲ ವಿಚಾರಣಾಧೀನ ಕೈದಿಗಳ ಹೆಸರಿನ ಬಗ್ಗೆ ಗೋಪ್ಯತೆ ಕಾಪಾಡಿಕೊಂಡಿರುವ ಪೊಲೀಸರು, ಅವರನ್ನು ತುಮಕೂರು ಜಿಲ್ಲಾ ಕಾರಾಗೃಹಕ್ಕೆ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಜೈಲಿನ ಸುತ್ತ ಬಿಗಿ ಭದ್ರತೆ: ಪರಪ್ಪರ ಅಗ್ರಹಾರ ಜೈಲಿನ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಾರಾಗ್ರಹ ಗೇಟ್ ಬಳಿ ಯಾರಿಗೂ ಅವಕಾಶ ನೀಡುತ್ತಿಲ್ಲ. ಸ್ಥಳಕ್ಕೆ ಡಿಸಿಪಿ ಸಿಕೆ ಬಾಬಾ ಆಗಮಿಸಿ, ಭದ್ರತೆ ಪರಿಶೀಲಿಸಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳಾದ ಪವನ್, ನಂದೀಶ್, ರವಿ, ಅನುಕುಮಾರ್, ಜಗದೀಶ್, ನಾಗರಾಜ್, ಲಕ್ಷ್ಮಣ್ ಅವರು ಜೂನ್ 20 ರಂದು ಪರಪ್ಪನ ಅಗ್ರಹಾರ ಸೇರಿದ್ದಾರೆ. ಹಾಗೆಯೇ ಕಾರ್ತಿಕ್, ನಿಖಿಲ್ ಹಾಗೂ ಕೇಶವಮೂರ್ತಿ ಹಾಗೂ ದೀಪಕ್ ಕೂಡ ಈಗಾಗಲೇ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: ದರ್ಶನ್ ಪ್ರಕರಣ: ಸರ್ಕಾರ ನೇಮಿಸಿರುವ ಎಸ್‌ಪಿಪಿ ಪ್ರಸನ್ನ ಕುಮಾರ್ ಯಾರು?, ಹಿನ್ನೆಲೆ ಏನು? - P Prasanna Kumar