ವಿಜಯಪುರ: ರೇಣುಕಾಸ್ವಾಮಿ ಕೊಲೆ ಪ್ರಕರಣದ 10ನೇ ಆರೋಪಿ ವಿನಯ್ನನ್ನು ಪರಪ್ಪನ ಅಗ್ರಹಾರದಿಂದ ವಿಜಯಪುರದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಕೆಎ 01 ಜಿ 6892 ನಂಬರಿನ ಪೊಲೀಸ್ ವಾಹನದಲ್ಲಿ ವಿನಯನನ್ನು ಕರೆತರಲಾಗಿದ್ದು, ಎರಡು ಬ್ಯಾಗ್ಗಳೊಂದಿಗೆ ಆರೋಪಿ ಆಗಮಿಸಿದ್ದಾನೆ.
ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿ, ಆರೋಪಿ ವಿನಯ್ ಆರೋಗ್ಯ ತಪಾಸಣೆ ನಡೆಸಿ ಇತರೆ ಕಾನೂನು ಪ್ರಕ್ರಿಯೆ ಬಳಿಕ ಕೇಂದ್ರ ಕಾರಾಗೃಹದ ಒಳಗೆ ಕರೆದೊಯ್ದರು. ಕಾರಾಗೃಹದ ವಿಶೇಷ ಸೆಲ್ಗಳ ಪೈಕಿ ಸೆಲ್ ನಂಬರ್ 1 ರಲ್ಲಿ ವಿನಯ್ನನ್ನು ಇರಿಸಲಾಗಿದೆ. ಕಾರಾಗೃಹದ ಅಧಿಕಾರಿಗಳು ವಿನಯ್ಗೆ 14,433 ನೂತನ ಕೈದಿ ನಂಬರ್ ನೀಡಿದ್ದಾರೆ. ಈ ಸೆಲ್ನಲ್ಲಿ ಅಟ್ಯಾಚ್ಡ್ ಬಾತ್ ರೂಂ ಹಾಗೂ ಫ್ಯಾನ್ ಸೌಲಭ್ಯವಿದೆ.
ವಾರದಲ್ಲಿ ಒಂದು ಬಾರಿ ಕುಟುಂಬಸ್ಥರಿಗೆ ಹಾಗೂ ಅವರ ಪರ ನ್ಯಾಯವಾದಿಗಳಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗಿದೆ ಎಂದು ಕಾರಾಗೃಹ ಅಧೀಕ್ಷಕ ಮ್ಯಾಗೇರಿ ಮಾಹಿತಿ ನೀಡಿದ್ದಾರೆ.
ವಿನಯ್ ಕುಟುಂಬಸ್ಥರಿಗೆ ಸೇರಿದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು.
ಇದನ್ನೂ ಓದಿ: ದರ್ಶನ್ ನೋಡಲು ವಕೀಲರ ತಂಡದೊಂದಿಗೆ ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ - VIJAYALAKSHMI VISITS BELLARY JAIL