ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿಯ ಕೆಲ ನಾಯಕರು ಅತೃಪ್ತರಾಗಿದ್ದರು. ಬಳಿಕ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರನ್ನು ಬದಲಾವಣೆ ಮಾಡಬೇಕು ಎಂದು ರೆಬಲ್ಸ್ ಟೀಂ ಪಟ್ಟು ಹಿಡಿದಿತ್ತು. ಆದರೆ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ ವಾಲ್ ಅವರ ನೇತೃತ್ವದಲ್ಲಿ ರೆಬಲ್ ಟೀಂನ ಮನವೊಲಿಸಲಾಗಿತ್ತು.
ಆದರೆ, ಇದೀಗ ರೆಬಲ್ಸ್ ಟೀಂನ ನಾಯಕ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಜಿಲ್ಲಾ ಬಿಜೆಪಿಯಿಂದ ಹೊಸ ಜವಾಬ್ಧಾರಿ ಕೊಡಲಾಗಿದೆ. ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ವಿರುದ್ಧ ಬಂಡಾಯ ಸಮರ ಸಾರಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅಂಡ್ ಟೀಂ ಇದೀಗ ರಾಜ್ಯ ನಾಯಕರ ಮುಂದೆ ಮಂಡಿಯೂರಿದೆ.
ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿದ್ದ ಸಂಧಾನ ಸಭೆ ಯಶಸ್ವಿಯಾದ ಬಳಿಕ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರಿಗೆ ದಾವಣಗೆರೆ ಜಿಲ್ಲಾ ಚುನಾವಣಾ ಉಸ್ತುವಾರಿ ಜವಾಬ್ದಾರಿ ನೀಡಿದರೆ, ಇತ್ತ ಲೋಕಸಭಾ ಕ್ಷೇತ್ರದ ಸಂಚಾಲಕರಾಗಿ ಎಂ.ಪಿ. ರೇಣುಕಾಚಾರ್ಯ ಅವರನ್ನು ನೇಮಕ ಮಾಡಿದೆ. ಇನ್ನು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಅವರ ಸೂಚನೆಯಂತೆ ಸಂಚಾಲಕರನ್ನಾಗಿ ನೇಮಿಸಿದ ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಅವರು ಆದೇಶ ಹೊರಡಿಸಿದ್ದಾರೆ.
ಇನ್ನು ಸಂಧಾನ ಸಭೆಯಲ್ಲಿ ರೆಬಲ್ ಟೀಂ ಚುನಾವಣಾ ಪದಾಧಿಕಾರಿಗಳ ಆಯ್ಕೆಯಲ್ಲಿ ನಮ್ಮವರಿಗೆ ಉನ್ನತ ಸ್ಥಾನಗಳನ್ನು ಕೊಡಬೇಕೆಂದು ಬೇಡಿಕೆ ಇಟ್ಟಿತ್ತು. ಇದೀಗ ಜಿಲ್ಲಾ ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ.
ಇದನ್ನೂ ಓದಿ: ಜಿ ಎಂ ಸಿದ್ದೇಶ್ವರ್ ಕುಟುಂಬಕ್ಕೆ ಟಿಕೆಟ್ ನೀಡಿದರೆ ನಮ್ಮ ಬೆಂಬಲವಿಲ್ಲ: ಎಂ ಪಿ ರೇಣುಕಾಚಾರ್ಯ