ಕಾರವಾರ: ಆ ಸಂಸ್ಥೆಯ ವಿದ್ಯಾರ್ಥಿಗಳು ಕಳೆದ ಎರಡು ದಶಕಗಳಿಂದ ಜಿಲ್ಲಾಸ್ಪತ್ರೆಯಲ್ಲಿಯೇ ಕ್ಲಿನಿಕಲ್ ತರಬೇತಿ ಪಡೆಯುತ್ತಿದ್ದವರು. ಆದರೆ ಇದೀಗ ವಿದ್ಯಾರ್ಥಿಗಳಿಗೆ ತರಬೇತಿ ಮುಂದುವರಿಸಲು ಕಿಮ್ಸ್ ಆಡಳಿತಾಧಿಕಾರಿಗಳು ನಿರಾಕರಿಸಿದ ಪರಿಣಾಮ ನೂರಾರು ವಿದ್ಯಾರ್ಥಿನಿಯರಿಗೆ ಇದೀಗ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾರವಾರ ತಾಲ್ಲೂಕಿನ ಸದಾಶಿವಗಡದಲ್ಲಿ ಬಿಜಿವಿಎಸ್ ಸಮಿತಿಯಡಿ ಸುಮತಿ ನಾಯ್ಕ ಇನ್ಸಿಟ್ಯೂಟ್ನ ನೂರಕ್ಕೂ ಅಧಿಕ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಜಿಲ್ಲಾಸ್ಪತ್ರೆಯಲ್ಲಿಯೇ ಪ್ರಾಯೋಗಿಕ ತರಬೇತಿ ಸೌಲಭ್ಯ ಪಡೆಯುತ್ತಿದ್ದಾರೆ. ಇದಕ್ಕಾಗಿ ಪ್ರತಿ ವರ್ಷ ಓರ್ವ ವಿದ್ಯಾರ್ಥಿನಿ ಕಿಮ್ಸ್ಗೆ 4.5 ಸಾವಿರ ರೂ. ಶುಲ್ಕ ಕೂಡ ಪಾವತಿ ಮಾಡುತ್ತಿದ್ದರು. ಆದರೆ ಈ ಬಾರಿಯೂ ಕ್ಲಿನಿಕಲ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ 4.5 ಸಾವಿರ ಶುಲ್ಕ ತುಂಬಿದ ಬಳಿಕ ನರ್ಸಿಂಗ್ ಕಾಲೇಜುಗಳು ಸ್ವಂತ ಆಸ್ಪತ್ರೆ ಹೊಂದಿರಬೇಕು. ಕಿಮ್ಸ್ನಲ್ಲಿ ಹೊರ ಭಾಗದವರಿಗೆ ಅವಕಾಶ ನೀಡದಂತೆ ಇಲಾಖೆಯಿಂದ ಆದೇಶ ಆಗಿರುವುದಾಗಿ ತಿಳಿಸಿದೆ. ಈ ಆದೇಶ ಬಂದ ಬಳಿಕ ಇದೀಗ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ವಿದ್ಯಾರ್ಥಿನಿಯರು ಕಾರವಾರ ಶಾಸಕ ಸತೀಶ್ ಸೈಲ್ ಅವರಿಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸೈಲ್ ಅವರು, ಕಿಮ್ಸ್ ಆಸ್ಪತ್ರೆಯಲ್ಲಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ಅವರ ಭವಿಷ್ಯದ ಜೊತೆಗೆ ಆಟವಾಡಲಾಗುತ್ತಿದೆ. ಕಾರವಾರದ ಮೆಡಿಕಲ್ ಕಾಲೇಜು ವರ್ಸ್ಟ್ ಕಾಲೇಜು. ಇಲ್ಲಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇಲ್ಲಿ ಇರುವಷ್ಟು ಅವ್ಯವಸ್ಥೆ ರಾಜ್ಯದ ಬೇರೆ ಯಾವುದೇ ಮೆಡಿಕಲ್ ಕಾಲೇಜಿನಲ್ಲಿ ಇರಲ್ಲ ಎಂದು ಗರಂ ಆದರು.
ತಾಲೂಕಿನ ಬಿಜಿವಿಎಸ್ ಕಾಲೇಜಿನ ವಿದ್ಯಾರ್ಥಿಗಳು ಕಳೆದ 22 ವರ್ಷಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಕ್ಲಿನಿಕಲ್ ತರಬೇತಿಯನ್ನು ಪಡೆಯುತ್ತಿದ್ದರು. ಇದಕ್ಕಾಗಿ ಶುಲ್ಕವನ್ನು ಸಹ ಕಟ್ಟಿದ್ದಾರೆ. ಬೆಂಗಳೂರಿಗೆ ತೆರಳಿ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಾನು ವಿದ್ಯಾರ್ಥಿನಿಯರ ಪರವಿದ್ದು, ಅವರಿಗೆ ನ್ಯಾಯ ಸಿಗುವವರೆಗೆ ಸುಮ್ಮನಿರುವುದಿಲ್ಲ. ಕಾಲೇಜಿನ ಡೀನ್ ಹಾಗೂ ಆಡಳಿತಾಧಿಕಾರಿ ಆಸ್ಪತ್ರೆಯಲ್ಲಿ ನಿತ್ಯದ ಭೇಟಿ ಸಹ ನೀಡುವುದಿಲ್ಲ. ಅವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದರೆ ಸರಿ ಮಾಡುತ್ತೇವೆ ಎಂದು ಭರವಸೆಯಷ್ಟೇ ನೀಡುತ್ತಿದ್ದಾರೆ ಎಂದರು.