ಬೆಂಗಳೂರು: ನಗರದ ಕೇಂದ್ರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಸೊಂಟದಲ್ಲಿ ಗನ್ ಇಟ್ಟುಕೊಂಡು, ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಿದ್ದ ಸೈಯ್ಯದ್ ರಿಯಾಜ್ನ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡು ಬಿಟ್ಟು ಕಳುಹಿಸಿದ್ದಾರೆ.
ಭದ್ರತಾ ಲೋಪದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸೈಯ್ಯದ್ ರಿಯಾಜ್ ಅವರನ್ನು ವಶಕ್ಕೆ ಪಡೆದಿದ್ದ ಸಿದ್ದಾಪುರ ಠಾಣಾ ಪೊಲೀಸರು ತಡರಾತ್ರಿಯವರೆಗೂ ವಿಚಾರಣೆ ನಡೆಸಿ, ಆತನ ಹೇಳಿಕೆ ದಾಖಲಿಸಿದ್ದಾರೆ.
ಸೈಯ್ಯದ್ ರಿಯಾಜ್ ಹೇಳಿಕೆ : "ಸಾಮಾಜಿಕ ಕಾರ್ಯಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿರುವ ತನಗೆ ಜೀವ ಬೆದರಿಕೆಯಿದೆ. 2019ರಲ್ಲಿ ತಮ್ಮ ಹತ್ಯೆ ಯತ್ನ ನಡೆದ ಬಳಿಕ ಗನ್ ಪರವಾನಗಿ ಪಡೆದುಕೊಂಡಿದ್ದೇನೆ. ಚುನಾವಣಾ ಸಂದರ್ಭದಲ್ಲಿಯೂ ತನ್ನ ಮೇಲೆ ದಾಳಿ ನಡೆಯಬಹುದು ಎಂಬ ಕಾರಣಕ್ಕೆ ಗನ್ ಇರಿಸಿಕೊಳ್ಳಲು ವಿನಾಯಿತಿ ಪಡೆದುಕೊಂಡಿದ್ದೆ. ಸೋಮವಾರ ನಡೆದ ರ‍್ಯಾಲಿಯಲ್ಲಿ ಮುಖ್ಯಮಂತ್ರಿಗಳ ಮುಂದೆ ಹೋಗುವ ಉದ್ದೇಶ ನನಗೆ ಇರಲಿಲ್ಲ. ಪ್ರಚಾರದ ವಾಹನ ಬಂದಾಗ ನನ್ನ ಪಾಡಿಗೆ ನಾನು ಸೈಡಲ್ಲಿ ನಿಂತು ನೋಡುತ್ತಿದ್ದೆ. ನಮ್ಮ ಆರ್.ವಿ.ದೇವರಾಜ್ ಸರ್ ನನ್ನನ್ನು ಮೇಲೆ ಕರೆದರು ಎಂದು ಹೂವಿನ ಹಾರ ಹಾಕಲು ಹೋಗಿದ್ದೆ. ಆ ಸಂದರ್ಭದಲ್ಲಿ ನನ್ನ ಸೊಂಟದಲ್ಲಿದ್ದ ಗನ್ ಆಕಸ್ಮಿಕವಾಗಿ ಕಂಡಿದೆ" ಎಂದು ಪೊಲೀಸರ ಮುಂದೆ ಸೈಯ್ಯದ್ ರಿಯಾಜ್ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಕುರಿತು ಮಾತನಾಡಿದ ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್‌ನ ಮಾಜಿ ಶಾಸಕ ಆರ್.ವಿ.ದೇವರಾಜ್, ''ಸೈಯ್ಯದ್ ರಿಯಾಜ್ ಸಿದ್ದಾಪುರ ಭಾಗದಲ್ಲಿ ತುಂಬಾ ಒಳ್ಳೆಯ ಕಾಂಗ್ರೆಸ್ ಕಾರ್ಯಕರ್ತ. ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಕೆಲಸ ಮಾಡಿದ್ದಾನೆ. ಹಿಂದೂ-ಮುಸ್ಲಿಂರನ್ನು ಜೊತೆಗೂಡಿಸಿ ಕೆಲಸ ಮಾಡುತ್ತಿದ್ದಾನೆ. ನಿನ್ನೆಯ ಕಾರ್ಯಕ್ರಮದ ಸಂದರ್ಭದಲ್ಲಿ ನಾನೇ ಆತನನ್ನು ಮೇಲೆ ಕರೆದಿದ್ದೆ. ಗನ್ ತಂದಿದ್ದು ತಪ್ಪು ಎಂದು ನಾನು ಒಪ್ಪಿಕೊಳ್ಳುತ್ತೇನೆ'' ಎಂದಿದ್ದಾರೆ.
ಸದ್ಯ ಸೈಯ್ಯದ್ ರಿಯಾಜ್ ಹೇಳಿಕೆ ದಾಖಲಿಸಿಕೊಂಡಿರುವ ಸಿದ್ದಾಪುರ ಠಾಣಾ ಪೊಲೀಸರು ಗನ್ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಹಿರಿಯ ಅಧಿಕಾರಿಗಳ ಸೂಚನೆ ಪಡೆದು ನಿರ್ಧರಿಸಲು ಮುಂದಾಗಿದ್ದಾರೆ. ಗನ್ ಹೊಂದಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕೂಡಲೇ ರಿಯಾಜ್ ಅಹ್ಮದ್‌ನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದರು. ನಗರ ಪೊಲೀಸ್ ಆಯಕ್ತ ಬಿ.ದಯಾನಂದ ಸೂಚನೆ ಮೇರೆಗೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮತ್ತು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲ್ಸಾರ್ ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದರು.
ಇದನ್ನೂ ಓದಿ: ಸಿಎಂ ಭಾಗಿಯಾಗಿದ್ದ ಚುನಾವಣಾ ರ‍್ಯಾಲಿಯಲ್ಲಿ ಭದ್ರತಾ ಲೋಪ; ಪಿಸ್ತೂಲ್ ಹೊಂದಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ - Security Lapse