ಉಡುಪಿ: ಕಟ್ಟಡ ನಿರ್ಮಾಣ ಕೆಲಸ ಮಾಡುವ ಕೂಲಿ ಕಾರ್ಮಿಕನೊಬ್ಬ ಕೋಟ್ಯಂತರ ರೂಪಾಯಿ ದಾನ ಮಾಡಿದ ಅಪರೂಪದ ಕಥೆ ಇದು. ಅವರ ಕುರಿತಾದ ವಿಶೇಷ ವರದಿ ಇಲ್ಲಿದೆ.
ಉಡುಪಿ ಜಿಲ್ಲೆಯ ರವಿ ಕಟಪಾಡಿ ಎಂದರೆ ಎಲ್ಲರಿಗೂ ಚಿರಪರಿಚಿತ ಹೆಸರು. ಅಷ್ಟಮಿಯ ಎರಡು ದಿನಗಳ ಕಾಲ ವೇಷ ಧರಿಸಿ, ಸಂಗ್ರಹವಾದ ಲಕ್ಷಾಂತರ ರೂಪಾಯಿ ಹಣವನ್ನು ಅವರು ಬಡ ಮಕ್ಕಳ ಚಿಕಿತ್ಸೆಗೆಂದು ಕಣ್ಣು ಮುಚ್ಚಿ ದಾನ ಮಾಡುವ ಅಪರೂಪದ ಮಹಾದಾನಿ.
ಅಷ್ಟಮಿ, ಚೌತಿ ನವರಾತ್ರಿ ಬಂದ್ರೆ ನೂರಾರು ವೇಷಗಳು: ಉಡುಪಿಯಲ್ಲಿ ಅಷ್ಟಮಿ, ಚೌತಿ ನವರಾತ್ರಿ ಬಂದರೆ ನೂರಾರು ವೇಷಗಳು ಕಾಣಿಸುತ್ತವೆ. ಆದರೆ, ಕಟಪಾಡಿ ರವಿ ವೇಷ ಧರಿಸಿದರೆ ಅದರ ತೂಕಾನೇ ಬೇರೆ. ಕಳೆದ 10 ವರ್ಷಗಳಿಂದ ರವಿ ಕಟಪಾಡಿ ವೇಷ ತೊಡುತ್ತಿದ್ದಾರೆ. ಇತ್ತೀಚೆಗೆ 2021ರಲ್ಲಿ ಡಾರ್ಕ್ ಅಲೈಟ್, 2022ರಲ್ಲಿ ರಾಕ್ಷಸ, 2023ರಲ್ಲಿ ಈ ಸೀ ಫೋಕ್ ವೇಷ, ಹಾಗೂ 2024ರಲ್ಲಿ ಅವತಾರ್ ವೇಷ ಧರಿಸಿದ್ದು ಜನರ ಖುಷಿಗೆ ಪಾತ್ರವಾಗಿದೆ.
ಈ ವೇಷ ನೊಂದ ನೂರಾರು ಕುಟುಂಬದ ಮೊಗದಲ್ಲಿ ನಗು ಕಾಣುವುದಕ್ಕಾಗಿ. ಈ ಬಾರಿ ಶಾಲಾ ಮಕ್ಕಳನ್ನು ಖುಷಿ ಪಡಿಸುವ ಸಲುವಾಗಿ ಅವತಾರ್ 2ರ ವೇಷ ಧರಿಸಿದ್ದಾರೆ. ಎರಡು ದಿನಗಳ ಕಾಲ ವೇಷ ಧರಿಸಿ ಸುಮಾರು 5 ಲಕ್ಷದಷ್ಟು ಹಣವನ್ನು ರವಿ ಕಟಪಾಡಿ ಸಂಗ್ರಹ ಮಾಡಿದ್ದಾರೆ. ಸಂಗ್ರಹವಾದ ಈ ಹಣವನ್ನು ನಾಲ್ವರು ಮಕ್ಕಳ ಚಿಕಿತ್ಸೆಗೆ ನೆರವು ನೀಡಿದ್ದಾರೆ.
ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಭಾಗವಹಿಸಿದ್ದ ರವಿ ಕಟಪಾಡಿ: ಕಳೆದ 9 ವರ್ಷಗಳಲ್ಲಿ ಅಷ್ಟಮಿಯ ಸಂದರ್ಭದಲ್ಲಿ ವೇಷ ಧರಿಸಿ ರವಿ ಕಟಪಾಡಿ ದಾನ ಮಾಡಿರುವ ಮೊತ್ತ 1 ಕೋಟಿ 28 ಲಕ್ಷ ರೂಪಾಯಿ. ಇವರ ಈ ಕಾರ್ಯವನ್ನು ಮೆಚ್ಚಿ ಅಮಿತಾಭ್ ಬಚ್ಚನ್ ಅವರ ನಿರೂಪಣೆಯ ಕೌನ್ ಬನೇಗಾ ಕರೋಡ್ಪತಿ ಸಂಚಿಕೆಯಲ್ಲಿ ಕರೆಸಲಾಗಿತ್ತು. ಅಲ್ಲಿ ಗೆದ್ದ ಹಣವನ್ನು ಕೂಡ ರವಿ ಕಟಪಾಡಿ ಬಡ ಮಕ್ಕಳ ಚಿಕಿತ್ಸೆಗೆ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಇನ್ನು ಗಣೇಶ ಚತುರ್ಥಿಯ ವೇಳೆ ಮುಂಬೈಗೆ ರವಿ ಕಟಪಾಡಿಯನ್ನು ಅವರ ಅಭಿಮಾನಿಗಳು ಕರೆಸಿಕೊಂಡಿದ್ದರು. ಅಲ್ಲಿ ಹೋಗಿ ವೇಷ ಧರಿಸಿ ಸಂಗ್ರಹ ಮಾಡಿದ ಹಣಕ್ಕೆ ಮತ್ತೆ ಹಣ ಸೇರಿಸಿ ಇನ್ನಷ್ಟು ಮಕ್ಕಳಿಗೆ ನೆರವಾಗಿದ್ದಾರೆ. ಈ ಬಾರಿ ತನ್ನ ಗೆಳೆಯನ ಜೊತೆ ಅವತಾರ್ ವೇಷ ಧರಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ತಮ್ಮ ಸಾಧನೆಯ ಕುರಿತು ಮಾತನಾಡಿದ ರವಿ ಕಟಪಾಡಿಯವರು, "ವಿವಿಧ ವೇಷ ಧರಿಸುವ ಮೂಲಕ ನನ್ನ ಸಾಧನೆಗೆ ಉಡುಪಿಯ ಜನತೆ ಬಹಳ ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸಿದ್ದಾರೆ. ಅವರಿಗೆ ನಾನು ಸದಾ ಚಿರರುಣಿಯಾಗಿದ್ದೇನೆ. ಅಷ್ಟಮಿ, ನವರಾತ್ರಿ, ಗಣೇಶ ಚೌತಿಯಂದು ವಿವಿಧ ವೇಷಗಳನ್ನು ಧರಿಸಿ ನೊಂದ ಬಡ ಮಕ್ಕಳಿಗೆ, ಬಡ ಕುಟುಂಬಗಳಿಗೆ ಸಹಾಯ ಮಾಡುವುದು ನನ್ನ ಮುಖ್ಯ ಉದ್ದೇಶ ಹಾಗೂ ಗುರಿಯಾಗಿದೆ ಎಂದು ತಿಳಿಸಿದರು.
ಎಲ್ಲ ಕಾರಣಗಳಿಂದ ದಾನ ಧರ್ಮಕ್ಕೆ ಇನ್ನೊಂದು ಹೆಸರು ರವಿ ಕಟಪಾಡಿ ಎಂಬಂತಾಗಿದೆ. ಇವರನ್ನು ಕರಾವಳಿಯ ಕರ್ಣ ಅಂತಲೂ ಬಣ್ಣಿಸಲಾಗುತ್ತದೆ. ಒಟ್ಟಿನಲ್ಲಿ ಸಹಾಯ ಮಾಡುವ ಮನಸ್ಸುಗಳಿಗೆ ರವಿ ಕಟಪಾಡಿ ಒಂದು ನಿತ್ಯ ಸ್ಫೂರ್ತಿ ಎಂದರೆ ತಪ್ಪಲ್ಲ.
ಇದನ್ನೂ ಓದಿ: ಈ ಬಾರಿ ಡೀ ಮನ್ ರೂಪದಲ್ಲಿ ಅಬ್ಬರಿಸಿದ ಉಡುಪಿಯ ರವಿ ಕಟಪಾಡಿ