ಬೆಂಗಳೂರು: ನಗರದ ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸಿಸಿಬಿಗೆ ಹಸ್ತಾಂತರಿಸಿದ್ದು ಈ ಸಂಬಂಧ ತನಿಖೆ ಚುರುಕುಗೊಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗೇನ ಅಗ್ರಹಾರದ ಜಿ.ಎಂ.ಫಾರ್ಮ್ಹೌಸ್ನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದ ಕುರಿತು ಖಚಿತ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ಸೋಮವಾರ ನಸುಕಿನ ಜಾವ 2 ಗಂಟೆಗೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಬಹುತೇಕರನ್ನು ವಶಕ್ಕೆ ಪಡೆಯಲಾಗಿತ್ತು.
ಉಳಿದಂತೆ, ಪಾರ್ಟಿ ಆಯೋಜಕ ವಾಸು ಸೇರಿದಂತೆ ಅರುಣ್, ಸಿದ್ದಿಕ್, ರಣದೀರ್ ಹಾಗೂ ರಾಜ್ ಭಾವ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು ಅನೇಕ ಸಂಗತಿಗಳು ಬೆಳಕಿಗೆ ಬಂದಿವೆ. ಹಲವು ದಿನಗಳಿಂದ ಪಾರ್ಟಿ ನಡೆಸಲು ಸಿದ್ಧತೆ ನಡೆಸಿದ್ದ ಆರೋಪಿಗಳು ಶನಿವಾರದಿಂದಲೇ ಪಾರ್ಟಿ ಆರಂಭಿಸಿದ್ದು, ಭಾನುವಾರ ರಾತ್ರಿಯೂ ಮುಂದುವರೆದಿತ್ತು ಎಂದು ಹೇಳಲಾಗುತ್ತಿದೆ. ಪಾರ್ಟಿಯಲ್ಲಿ 250ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾಗಿ ತಿಳಿದುಬಂದಿದೆ. ಶನಿವಾರವೇ ಕೆಲವರು ಭಾಗಿಯಾಗಿ ತೆರಳಿದ್ದರು. ಇನ್ನೂ ಕೆಲವರು ಭಾನುವಾರ ಸೇರ್ಪಡೆಯಾಗಿದ್ದರು. ಪೊಲೀಸರು ದಾಳಿ ನಡೆಸಿದಾಗ ಕೆಲವರು ಪರಾರಿಯಾಗಿದ್ದಾರೆ. ಸದ್ಯ ಪರಾರಿಯಾಗಿದ್ದವರನ್ನು ವಿಚಾರಣೆಗೆ ಒಳಪಡಿಸಲು ಸಿಸಿಬಿ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬರ್ತ್‌ಡೇ ಪಾರ್ಟಿ ಹೆಸರಲ್ಲಿ ರೇವ್ ಪಾರ್ಟಿ ನಡೆದಿರುವುದನ್ನು ಕಂಡುಕೊಂಡಿರುವ ಅಧಿಕಾರಿಗಳಿಗೆ ಪಾರ್ಟಿಯಲ್ಲಿ ಡ್ರಗ್ಸ್ ಮಾತ್ರವಲ್ಲದೆ ಸೆಕ್ಸ್ ಜಾಲವೂ ಇತ್ತು ಎಂಬ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ತೀವ್ರಗೊಂಡಿದೆ. ಬಂಧಿತ ಆರೋಪಿ ವಾಸು ಎಂಬಾತ ಬರ್ತ್‌ಡೇ ಪಾರ್ಟಿ ಎಂದು ಆಯೋಜಿಸಿದ್ದ. ಅಸಲಿಗೆ ಆಯೋಜಕ ವಾಸು ಹುಟ್ಟುಹಬ್ಬ ಇರಲಿಲ್ಲ. ಓರ್ವರಿಗೆ ಇಂತಿಷ್ಟು ಎಂದು ಹಣ ಪಡೆದು ಪಾರ್ಟಿಗೆ ಕರೆಸಿದ್ದಾರೆ. ಪ್ರತಿಯೊಬ್ಬನ ಎಂಟ್ರಿಗೆ 2 ಲಕ್ಷ ರೂ ಪಡೆದಿದ್ದಾರೆ. ಯಾರಿಗಾದರೂ ಅನುಮಾನ ಬಂದು ಕೇಳಿದರೆ ಬರ್ತ್ ಡೇಗೆ ಬಂದಿದ್ದೇವೆ, ನಾವೆಲ್ಲರೂ ವಾಸು ಗೆಳೆಯರು ಎಂದು ಹೇಳಬೇಕು ಎಂದು ತಿಳಿಸಲಾಗಿತ್ತು. ಅದರಂತೆ ಪೊಲೀಸರು ಪ್ರಶ್ನಿಸಿದಾಗ ವಾಸು ಬರ್ತ್‌ಡೇಗೆ ಬಂದಿದ್ದೇವೆ ಎಂದು ಹೇಳಿಕೆ ನೀಡಿದ್ದರು ಎಂಬ ವಿಚಾರ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ರೇವ್ ಪಾರ್ಟಿಯಲ್ಲಿ ಪೋಷಕ ನಟಿ ಭಾಗಿ, ಐವರ ಬಂಧನ; ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ - BENGALURU RAVE PARTY CASE