ಶಿವಮೊಗ್ಗ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರ ಕುಟುಂಬಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತ ಬಳಗ ವತಿಯಿಂದ 5 ಲಕ್ಷ ರೂ. ನೀಡಲಾಯಿತು.
ಕೆಲ ದಿನಗಳ ಹಿಂದೆ ರಾಷ್ಟ್ರಭಕ್ತ ಬಳಗದ ವತಿಯಿಂದ 3 ಲಕ್ಷ ರೂ.ಗಳನ್ನು ನೀಡಲಾಗಿತ್ತು. ಶನಿವಾರ ಮತ್ತೆ ಕೆ.ಎಸ್. ಈಶ್ವರಪ್ಪನವರು ತಮ್ಮ ರಾಷ್ಟ್ರಭಕ್ತ ಬಳಗದವರ ಜೊತೆ ಮೊದಲು ವಿನೋಬನಗರದ ಶಿವಾಲಯದಲ್ಲಿ ಪೂಜೆ ಸಲ್ಲಿಸಿ, ಪಾದಯಾತ್ರೆಯ ಮೂಲಕ ಮೃತ ಚಂದ್ರಶೇಖರನ್ ಅವರ ಮನೆಗೆ ತೆರಳಿ ಅವರ ಪತ್ನಿ ಕವಿತಾ ಅವರಿಗೆ 5 ಲಕ್ಷ ರೂ.ಗಳನ್ನು ನೀಡಿದರು.
ನಂತರ ಮಾತನಾಡಿ "ರಾಜ್ಯ ಸರ್ಕಾರ ಭ್ರಷ್ಟಚಾರದಲ್ಲಿದೆ. ಅದಕ್ಕೆ ವಾಲ್ಮೀಕಿ ನಿಗಮದಲ್ಲಿನ ಭ್ರಷ್ಟಚಾರವೇ ಸಾಕ್ಷಿಯಾಗಿದೆ ಎಂಬುದನ್ನು ನಾನು ತುಂಬಾ ನೊಂದು ಹೇಳುತ್ತಿದ್ದೇನೆ. ಚಂದ್ರಶೇಖರನ್ ಅವರು ಮೃತಪಟ್ಟಾಗ ಸಿಎಂ ಇಲ್ಲಿಗೆ ಬರಬೇಕಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಬೇಕಿತ್ತು. ಅಂದಿನ ಸಚಿವರಾದ ನಾಗೇಂದ್ರ ಇವತ್ತು ಜೈಲಿನಲ್ಲಿ ಇದ್ದಾರೆ. ಮುಖ್ಯಮಂತ್ರಿಗಳು ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಾಗ ಪರಿಹಾರ ಕೊಡುವ ಭರವಸೆ ನೀಡಿದ್ದರು. ಆದರೆ ಅವರ ಭರವಸೆ ಹಾಗೆಯೇ ಉಳಿದಿದೆ. ಚಂದ್ರಶೇಖರ್ ಕುಟುಂಬಕ್ಕೆ ಈ ಹಿಂದೆ ರಾಷ್ಟ್ರ ಭಕ್ತರ ಬಳಗದಿಂದ 3 ಲಕ್ಷ ಕೊಟ್ಟಿದ್ದೆವು. ಈಗ 5 ಲಕ್ಷ ರೂ. ಪರಿಹಾರದ ಹಣ ಕೊಟ್ಟಿದ್ದೇವೆ".
"ಸೆಪ್ಟೆಂಬರ್ 20 ಒಳಗೆ ಸರಕಾರದ ಪರಿಹಾರ ಕೊಡಬೇಕು. ಒಂದು ವೇಳೆ ರಾಜ್ಯ ಸರ್ಕಾರ ಪರಿಹಾರ ಕೊಡದಿದ್ದರೆ 'ಜೈಲು ಭರೋ ಚಳುವಳಿ' ಮಾಡುತ್ತೆವೆ. ಚಂದ್ರಶೇಖರನ್ ಅವರ ಕುಟುಂಬಕ್ಕೆ ಪರಿಹಾರ ಸಿಗಲಿ ಅನ್ನೋದು ನಮ್ಮ ಉದ್ದೇಶವಾಗಿದೆ. ಸಿಎಂ ಪರಿಹಾರ ನೀಡುವ ಬಗ್ಗೆ ಗಮನ ಹರಿಸಲಿ ಎಂದರು ಈಶ್ವರಪ್ಪ ಅವರು ಎಚ್ಚರಿಕೆ ನೀಡಿದರು.
ಇದೇ ವೇಳೆ ಮಾತನಾಡಿದ ಚಂದ್ರಶೇಖರನ್ ಅವರ ಪತ್ನಿ ಕವಿತಾ, "ನನಗೆ ಬೆಂಬಲವಾಗಿ ನಿಂತಿರುವ ಎಲ್ಲಾರಿಗೂ ಧನ್ಯವಾದಗಳು. ಈ ಹಿಂದೆಯೂ ಈಶ್ವರಪ್ಪ ಅವರು ಬಂದಾಗ ಸಹಾಯ ಮಾಡಿದ್ದರು. ಅವರು ಹೇಳಿದಂತೆ ಈಗಲೂ ಸಹಾಯ ಮಾಡಿದ್ದಾರೆ. ಸರ್ಕಾರದಿಂದ ಇದುವರೆಗೂ ಸಹ ಯಾವುದೇ ಸಹಾಯ ಬಂದಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.