ಬೆಂಗಳೂರು : ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸಬಲರಾಗುವುದನ್ನು ಕಂಡು ಸಹಿಸಿಕೊಳ್ಳಲಾಗದ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ, ಹಳ್ಳಿಯ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದಾರೆ ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.
ಮಹಿಳೆಯರನ್ನು ಗೌರವಿಸದ ಬಿಜೆಪಿಯ ಜೊತೆ ಸಂಬಂಧ ಬೆಳೆದ ಕೂಡಲೇ ಮಹಿಳೆಯರ ನಡತೆಯ ಬಗ್ಗೆ ಮಾತಾಡುವಷ್ಟು ಉದ್ಧಟತನ ಬಂದಿತೆ ಕುಮಾರಸ್ವಾಮಿಯವರೇ?. ಹಿಂದೆ ಸುಮಲತಾ ಅವರನ್ನು ಎಲ್ಲಿ ಮಲಗಿದ್ದೆ? ಎಂದು ಕೇಳಿದ್ದಿರಿ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ರಾಜ್ಯದ ಮಹಿಳೆಯರ ನಡತೆಗೆ ಕಪ್ಪು ಚುಕ್ಕೆ ತರುವಂತೆ ಮಾತಾಡಿದ್ದೀರಿ. ಇದು ನಿಜವಾಗಿಯೂ ಅಕ್ಷಮ್ಯ ಎಂದು ಟೀಕಿಸಿದ್ದಾರೆ.
ಮದ್ಯದ ಬೆಲೆಯ ಬಗ್ಗೆ ಮಾತಾಡಿ, ಪುರುಷರನ್ನು ದಾರಿ ತಪ್ಪಿಸುವ ಮನೆ ಒಡೆಯುವ ಕೆಲಸ ಮಾಡಿದ್ದಾಯಿತು. ಈಗ ಗೃಹಲಕ್ಷ್ಮಿಯರ ಬಗ್ಗೆ ಮಾತಾಡಿ ಜನರ ದಿಕ್ಕು ತಪ್ಪಿಸುತ್ತಿದ್ದೀರಾ?. ನಿಜವಾಗಿಯೂ ದಾರಿ ತಪ್ಪಿದವರು ನೀವೇ ಹೊರತು, ಮಹಿಳೆಯರಲ್ಲ ಮಿಸ್ಟರ್ ಕುಮಾರಸ್ವಾಮಿಯವರೇ. ದೇವೇಗೌಡರೇ ಹೆಣ್ಣುಮಕ್ಕಳನ್ನು ಅವಮಾನಿಸುವಂಥ ಮಾತುಗಳನ್ನಾಡಿದ ನಿಮ್ಮ ಮಗನ ಕೀಳು ಮಟ್ಟದ ಹೇಳಿಕೆಗೆ ನಿಮ್ಮ ಸಹಮತವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿಯವರೇ ನಿಮ್ಮ ತಂದೆ ಈ ದೇಶದ ಪ್ರಧಾನಿಯಾಗಿದ್ದವರು. ಅವರಾದರೂ ನಿಮ್ಮ ಈ ನೀಚ ಮನಸ್ಥಿತಿಯ ಮಾತನ್ನು ಒಪ್ಪುವರೇ?. ರಾಜ್ಯ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರೇ ಕುಮಾರಸ್ವಾಮಿ ಅವರ ಮಹಿಳೆಯರ ಬಗೆಗಿನ ಅವಹೇಳನಕಾರಿ ಹೇಳಿಕೆ ಬಗ್ಗೆ ಏನು ಹೇಳುವಿರಿ?. ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೀರಾ? ಇಲ್ಲ ಎಂದಾದರೆ ಬಿಜೆಪಿಯ ಜೊತೆಗಿನ ಜೆಡಿಎಸ್ ಮೈತ್ರಿಯನ್ನು ಕಡಿದುಕೊಳ್ಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಉತ್ತರಿಸಿ ಮೋದಿಯವರೇ, ಹಾಗಿದ್ದರೆ ನಿಮ್ಮ #BetiBachaoBetiPadao ಕೇವಲ ಬೂಟಾಟಿಕೆಯ ಘೋಷಣೆ ಅಷ್ಟೇನಾ?. ಮಹಿಳಾ ಸಬಲೀಕರಣವನ್ನು ಸಹಿಸಲಾಗದ ನಿಮ್ಮ ಮಹಿಳಾ ವಿರೋಧಿ ಮನಸ್ಥಿತಿಗೆ ಧಿಕ್ಕಾರವಿರಲಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ - HD Kumaraswamy