ಬೆಂಗಳೂರು : ರಾಜ್ಯವನ್ನೇ ಬೆಚ್ಚಿಬೀಳಿಸಿದ ದಿ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಸ್ವರ್ಣಾಂಭ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಆದ್ದರಿಂದ ಕಳೆದ 17 ದಿನಗಳಿಂದ ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ವರ್ಣಾಂಭ ಅವರನ್ನು ಇಂದು ಡಿಸ್ಚಾರ್ಜ್ ಮಾಡಿದ್ದಾರೆ.
ಮಾರ್ಚ್ 1ರಂದು ಐಟಿಪಿಎಲ್ ರಸ್ತೆಯ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಕೆಫೆ ಸಿಬ್ಬಂದಿ, ಗ್ರಾಹಕರ ಸಹಿತ 9 ಜನ ಗಾಯಗೊಂಡಿದ್ದರು. ಆ ಪೈಕಿ ಕಣ್ಣು, ಕಿವಿ, ಹೊಟ್ಟೆ ಸೇರಿದಂತೆ ಶೇ 40ರಷ್ಟು ಸುಟ್ಟ ಗಾಯಗಳಿಂದ ಪಾರಾಗಿದ್ದ ಸ್ವರ್ಣಾಂಭ ಅವರನ್ನು ಬ್ರೂಕ್ ಫೀಲ್ಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಇಂದು ಸಂಜೆ 6 ಗಂಟೆಗೆ ಸ್ವರ್ಣಾಂಭರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
''ಗಾಯಾಳು ತನ್ನ ಸಾಮಾನ್ಯ ಕೆಲಸಗಳನ್ನು ಮಾಡಲು ಸಾಧ್ಯವಾಗುವಂತೆ ಚೇತರಿಸಿಕೊಳ್ಳಲು ಇನ್ನೂ ಸುಮಾರು ಒಂದು ತಿಂಗಳ ಬೇಕಾಗಬಹುದು. ಆದ್ದರಿಂದ ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು ಹಾಗೂ ನಾಲ್ಕೈದು ದಿನಗಳಿಗೆ ಒಮ್ಮೆ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಸೂಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಕಿವಿ, ಕಣ್ಣಿಗೆ ಯಾವುದೇ ಸಮಸ್ಯೆಯಿಲ್ಲ. ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಪೈಕಿ ಕೊನೆಯವರಾದ ಸ್ವರ್ಣಾಂಭರನ್ನು ಇಂದು ಡಿಸ್ಚಾರ್ಜ್ ಮಾಡುತ್ತಿದ್ದೇವೆ'' ಎಂದು ಬ್ರೂಕ್ ಫೀಲ್ಡ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಪ್ರದೀಪ್ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು, ಇತರೆ ವೈದ್ಯಕೀಯ ಸಿಬ್ಬಂದಿಗಳು, ಹಾಗೂ ಬ್ರೂಕ್ ಫೀಲ್ಡ್ ಆಸ್ಪತ್ರೆಯ ಮೇಲೆ ಭರವಸೆಯಿಟ್ಟ ಗಾಯಾಳುಗಳ ಸಂಬಂಧಿಕರು, ಹಿತೈಷಿಗಳಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಧನ್ಯವಾದ ತಿಳಿಸಿದೆ.
ಇದನ್ನೂ ಓದಿ : ಸ್ಫೋಟಗೊಂಡಿದ್ದ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ದೋಸೆ ಸವಿದ ಸಿಂಗಾಪೂರದ ರಾಯಭಾರಿ