ಚಿಕ್ಕೋಡಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಕೊನೆ ಕ್ಷಣದಲ್ಲಿ ನನಗೆ ಟಿಕೆಟ್ ಕೈತಪ್ಪಿದೆ. ಇದರಿಂದ ಕಾರ್ಯಕರ್ತರು ನಾವು ಅತಂತ್ರರಾಗಿದ್ದೇವೆ ಎಂದು ತುಂಬಾ ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ಹುಣ್ಣಿಮೆ ಆದ ಬಳಿಕ ಬೆಂಬಲಿಗರ ಜೊತೆ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಟಿಕೆಟ್ ವಂಚಿತ ರಮೇಶ್ ಕತ್ತಿ ಹೇಳಿದರು.
ಅವರು ಬುಧವಾರ ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ನಾನು ಚಿಕ್ಕೋಡಿ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈ ಬಾರಿ ನನಗೆ ಬಿ ಫಾರ್ಮ್ ಸಿಗುತ್ತದೆ ಎಂದು ತುಂಬಾ ವಿಶ್ವಾಸದಲ್ಲಿದ್ದೆ. ನನ್ನ ಪರವಾಗಿ ಬಿ. ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವರಿಷ್ಠರ ಹತ್ರ ನನ್ನ ಪರವಾಗಿ ಪ್ರಯತ್ನ ಮಾಡಿದರು. ಆದರೂ ನನಗೆ ಟಿಕೆಟ್ ತಪ್ಪಿದೆ. ನಾನು ಟಿಕೆಟ್ನಿಂದ ವಂಚಿತನಾಗಿದ್ದೇನೆ. ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಣಯಕ್ಕೆ ನಾನು ಬದ್ಧನಾಗಿದ್ದೇನೆ. ಅಣ್ಣಾಸಾಬ್ ಜೊಲ್ಲೆಗೆ ಟಿಕೆಟ್ ಸಿಕ್ಕಿದೆ. ನಾನು ಸ್ವಾಗತ ಬಯಸುತ್ತೇನೆ. ಪಕ್ಷದ ಪರವಾಗಿ ನಾನು ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬರಿಗೆ ಟಿಕೆಟ್ ನೀಡುತ್ತಾರೆ. ದಶಕಗಳಿಂದ ಕಾರ್ಯಕರ್ತರ ಜೊತೆ ನಾನು ಒಡನಾಟ ಇಟ್ಟುಕೊಂಡಿದ್ದೇನೆ. ಕ್ಷೇತ್ರದಲ್ಲಿ ಪ್ರತಿಯೊಂದು ಕುಟುಂಬದ ಜೊತೆ ನಾನು ಸಹೋದರ ಸದಸ್ಯನಾಗಿದ್ದೇನೆ. ಈ ಬಾರಿ ರಮೇಶ್ ಕತ್ತಿಗೆ ಟಿಕೆಟ್ ಸಿಗುತ್ತೆ ಅಂತ ಕ್ಷೇತ್ರದ ಜನರ ನಂಬಿಕೆ ಆಗಿತ್ತು. ಟಿಕೆಟ್ ಸಿಗದೇ ಇರುವುದರಿಂದ ಅವರಿಗೆ ನೋವಾಗಿದೆ. ಕ್ಷೇತ್ರದ ಜನರು ಏನಾದರೂ ಮಾಡಿ ಎಂದು ನನಗೆ ಒತ್ತಾಯ ಮಾಡುತ್ತಿದ್ದಾರೆ. ಪ್ರಮುಖವಾಗಿ ಕಾರ್ಯಕರ್ತರೇ ನಮ್ಮ ಆಸ್ತಿ ಇರುವುದರಿಂದ ಅವರ ಒತ್ತಾಯಕ್ಕೆ ನಾವು ಮಣಿಯಲೇಬೇಕು ಎಂದರು.
ಹೋಳಿ ಹುಣ್ಣಿಮೆ ಆದ ನಂತರ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನನ್ನ ಬೆಂಬಲಿಗರ ಹಾಗೂ ಅಭಿಮಾನಿಗಳ ಸಭೆ ಕರೆಯಲಾಗುವುದು. ಆ ಸಭೆಯಲ್ಲಿ ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು.
2019ರಲ್ಲಿ ನಾನು ಚಿಕ್ಕೋಡಿ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಅವತ್ತು ಟಿಕೆಟ್ ತಪ್ಪಿಸಿ ನನಗೆ ಬಿಜೆಪಿ ನಾಯಕರು ರಾಜ್ಯಸಭಾ ಅಥವಾ ವಿಧಾನಪರಿಷತ್ ಸದಸ್ಯ ಸ್ಥಾನವನ್ನು ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಭರವಸೆ ಭರವಸೆಯಾಗಿಯೇ ಉಳಿಯಿತು. ಈ ಬಾರಿ ಟಿಕೆಟ್ ಕೊಡ್ತೀನಿ ಎಂದು ಕೂಡಾ ತಿಳಿಸಿದ್ದರು. ಈಗಲೂ ಟಿಕೆಟ್ ತಪ್ಪಿದ್ದರಿಂದ ನಾವು ಅತಂತ್ರರಾಗಿದ್ದೇವೆ ಎಂದು ಬೆಂಬಲಿಗರು ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನಾನು ಇದುವರೆಗೆ ಯಾವುದೇ ತೀರ್ಮಾನ ಮಾಡಿಲ್ಲ. ಹುಣ್ಣಿಮೆಯಾದ ನಂತರ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಬೆಂಬಲಿಗರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ನೋಡೋಣ ಎಂದರು.
ರಮೇಶ್ ಕತ್ತಿ ಕಾಂಗ್ರೆಸ್ ಸೇರುವ ವಿಚಾರವಾಗಿ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಎಂದು ಮಾಧ್ಯಮದಲ್ಲಿ ಸುದ್ದಿ ಬರುವುದನ್ನು ನೋಡಿದ್ದೇನೆ. ನನ್ನನ್ನು ಇದುವರೆಗೂ ಯಾವೊಬ್ಬ ಕಾಂಗ್ರೆಸ್ ಮುಖಂಡರು ಸಂಪರ್ಕ ಮಾಡಿಲ್ಲ. ಮಾಧ್ಯಮದಲ್ಲಿ ರಾಜು ಕಾಗೆ ಅವರು ಕಾಂಗ್ರೆಸ್ಸಿಗೆ ಬರುವಂತೆ ಆಹ್ವಾನ ಮಾಡಿದ್ದು ನೋಡಿದ್ದೇನೆ. ಇದುವರೆಗೆ ಕೈ ಮುಖಂಡರು ನನ್ನ ವೈಯಕ್ತಿಕವಾಗಿ ಸಂಪರ್ಕ ಮಾಡಿಲ್ಲ ಎಂದು ತಿಳಿಸಿದರು.
ಜೊಲ್ಲೆ ಪರವಾಗಿ ಪ್ರಚಾರಕ್ಕೆ ಹೋಗುತ್ತೀರಾ ಎಂಬ ವಿಚಾರ: ಇನ್ನು ಚುನಾವಣೆಗೆ ಸಮಯವಿದೆ. ನಾನು ಅಣ್ಣಸಾಬ್ ಜೊಲ್ಲೆ ವೈರಿಗಳಲ್ಲ. ಹೊಡೆದಾಟ ಬಡಿದಾಟ ಯಾವುದನ್ನು ಮಾಡಿಲ್ಲ. ಎರಡನೇ ಹಂತದ ಚುನಾವಣೆ ಇರುವುದರಿಂದ ತುಂಬಾ ಸಮಯವಿದೆ ಕಾದು ನೋಡಿ ಎಂದು ಹೇಳಿದರು.
ಇದನ್ನೂ ಓದಿ : ದಾವಣಗೆರೆಯಿಂದ ವಿನಯ್ ಕುಮಾರ್ಗೆ ಟಿಕೆಟ್ ಕೊಡದಿದ್ದರೆ ಸಭೆ ನಡೆಸಿ ಮುಂದಿನ ತೀರ್ಮಾನ : ಅಹಿಂದ ಮುಖಂಡರ ಎಚ್ಚರಿಕೆ