ಚಿಕ್ಕೋಡಿ (ಬೆಳಗಾವಿ ) : ಲೋಕಸಭಾ ಚುನಾವಣೆ ಸಮಯದಲ್ಲಿ ವಾಲ್ಮೀಕಿ ನಿಗಮದ ಹಣವನ್ನು ಅಕ್ರಮವಾಗಿ ಬಳಸಿಕೊಂಡು, ಆಂಧ್ರ ಪ್ರದೇಶ ಮತ್ತು ರಾಜ್ಯದ ಬಳ್ಳಾರಿ, ರಾಯಚೂರು ಕ್ಷೇತ್ರಗಳಲ್ಲಿ ನಿಗಮದ ಹಣವನ್ನು ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷ ಗೆಲುವನ್ನು ಕಂಡಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ಅವರು ಬುಧವಾರ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ವಾಲ್ಮೀಕಿ ನಿಗಮದಲ್ಲಿ ಈಗಾಗಲೇ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಈ ಕುರಿತು ಓರ್ವ ಅಧಿಕಾರಿ ಕೂಡ ಸೂಸೈಡ್ ಮಾಡಿಕೊಂಡಿದ್ದಾರೆ. ಅಧಿಕಾರಿ ಸಾವಿನ ನಂತರವಷ್ಟೇ ಬ್ರಹ್ಮಾಂಡ ಭ್ರಷ್ಟಾಚಾರ ಹೊರ ಬಿದ್ದಿದೆ. ಈ ತನಿಖೆಯಲ್ಲಿ ಹಲವು ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ಸರ್ಕಾರವೂ ಕೂಡ ಎಸ್ಐಟಿ ರಚನೆ ಮಾಡಿದೆ ಎಂದರು.
ವಿಶೇಷ ಪೊಲೀಸ್ ದಳದಿಂದ ನ್ಯಾಯ ಸಿಗೋದಿಲ್ಲ. ಈ ಪ್ರಕರಣವನ್ನು ಸಿಬಿಐಗೆ ನೀಡಿದರೆ ಸತ್ಯಾಸತ್ಯತೆ ಹೊರಬರುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ಕೇಳಿ ಬರುತ್ತಿದೆ. ಈ ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಬರುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಲಾಗುವುದು ಎಂದು ಸರ್ಕಾರದ ವಿರುದ್ಧ ಗುಡುಗಿದರು.
ವಾಲ್ಮೀಕಿ ನಿಗಮದ ಹಣ ಹೈದರಾಬಾದ್ನಿಂದ ಖಾಸಗಿ ಖಾತೆಗಳಿಗೆ ವರ್ಗಾವಣೆಯಾಗಿದೆ. ಅಲ್ಲಿಂದ ಬೇಕಾದವರ ಖಾತೆಗಳಿಗೆ ಜಮಾ ಮಾಡಿಕೊಂಡು ಚುನಾವಣೆಗೆ ಅಕ್ರಮವಾಗಿ ಬಳಸಿಕೊಂಡು, ಅಲ್ಲಿ ಕೆಲವು ಸಂಸದರು ಆಯ್ಕೆಯಾಗಿದ್ದಾರೆ. ಜೊತೆಗೆ ಕರ್ನಾಟಕದ ಬಳ್ಳಾರಿ ಹಾಗೂ ರಾಯಚೂರು ಕ್ಷೇತ್ರಗಳಲ್ಲೂ ಕೂಡ ಈ ಹಣ ಬಳಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿದರು.
ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿ ಹಣವನ್ನು ಕಾಂಗ್ರೆಸ್ ಸರ್ಕಾರ ಇತಿಹಾಸದಲ್ಲೇ ಮೊದಲ ಬಾರಿಗೆ ಬಳಸಿಕೊಂಡು ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಹಲವಾರು ಯೋಜನೆಗಳಿಗೆ ಈ ಹಣವನ್ನು ಮೀಸಲಾಗಿಟ್ಟಿರುತ್ತದೆ. ಆದರೆ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಆ ಹಣಕ್ಕೆ ಕನ್ನವನ್ನು ಹಾಕಿ ಅವರಿಗೆ ಅನ್ಯಾಯವನ್ನು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಆ ಹಣವೂ ಸಾಲದಕ್ಕೆ ಸದ್ಯ ಜನಸಾಮಾನ್ಯರ ಜೇಬಿಗೆ ಕತ್ತರಿಯನ್ನು ಹಾಕಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಯಾವುದೇ ಮೂಲೆಯಲ್ಲೂ ಅಭಿವೃದ್ಧಿ ಮರೀಚಿಕೆಯಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕುಂಠಿತವಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮ್ಮಾಜೇಶ್ವರಿ, ಬಸವೇಶ್ವರ ಏತ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಕಾಂಗ್ರೆಸ್ ಸರ್ಕಾರ ಪ್ರಾರಂಭ ಮಾಡಬೇಕು. ಬಿಜೆಪಿ ಸರ್ಕಾರ ಇದ್ದಾಗ ಕಾಮಗಾರಿ ಚುರುಕು ಪಡೆದುಕೊಂಡಿತ್ತು. ಈ ಸರ್ಕಾರ ಬಂದ ಮೇಲೆ ಕಾಮಗಾರಿ ಎಲ್ಲವೂ ನಿಂತು ಹೋಗಿದೆ. ಅಲ್ಲಿನ ಸ್ಥಳೀಯ ಜನರು ನಮಗೆ ಭೇಟಿಯಾಗಿ ಕಾಮಗಾರಿಯನ್ನು ಮುಗಿಸುವಂತೆ ಕೇಳುತ್ತಿದ್ದಾರೆ. ಅಥಣಿ ಶಾಸಕ ಲಕ್ಷ್ಮಣ್ ಸವದಿ, ಕಾಗವಾಡ ಶಾಸಕ ರಾಜು ಕಾಗೆ ಅವರು ಪಕ್ಷಭೇದವನ್ನು ಮರೆತು ಅಭಿವೃದ್ಧಿ ಕಡೆಗೆ ಹೆಚ್ಚಿನ ಒತ್ತು ನೀಡಲಿ ಎಂದು ಸಲಹೆ ನೀಡಿದರು.
ಬರಗಾಲ ಸಮಯದಲ್ಲಿ ರೈತರಿಗೆ ತುಂಬಲಾರದ ನಷ್ಟವಾಗಿದೆ. ಆದ್ರೆ ಸಿದ್ದರಾಮಯ್ಯನವರ ಸರ್ಕಾರ ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಅಲ್ಪ ಪ್ರಮಾಣದ ಬೆಳೆ ಪರಿಹಾರ ಹಣವನ್ನು ನೀಡಿದ್ದಾರೆ. ಅದೆಷ್ಟೋ ರೈತರ ಖಾತೆಗಳ ಹಣ ವರ್ಗಾವಣೆ ಆಗಿಲ್ಲ. ಉಳಿದ ರೈತರು ತಾಲೂಕಿನ ತಹಶೀಲ್ದಾರ್ ಕಚೇರಿಗಳ ಎದುರು ತಮ್ಮ ದಿನನಿತ್ಯದ ಕಾರ್ಯ ವೈಖರಿಗಳನ್ನು ಬಿಟ್ಟು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಉದ್ಭವವಾಗಿದೆ. ಆಗಿರುವ ತೊಂದರೆಯನ್ನು ಸರ್ಕಾರ ಸರಿಪಡಿಸಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ವಾಲ್ಮೀಕಿ ನಿಗಮ ಅಕ್ರಮ: ಮಾಜಿ ಸಚಿವ ಬಿ.ನಾಗೇಂದ್ರ, ಬಸವನಗೌಡ ದದ್ದಲ್ ಮನೆ ಮೇಲೆ ಇಡಿ ದಾಳಿ.. ಮೂವರು ವಶಕ್ಕೆ - Valmiki Nigam Scam