ಬೆಂಗಳೂರು: ಚಾಮರಾಜಪೇಟೆಯ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಿಂದ ಕೋಟ್ಯಾಂತರ ರೂಪಾಯಿ ಸಾಲ ಪಡೆದು ವಂಚಿಸಿದ ಆರೋಪದಡಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿ ಮೂವರ ವಿರುದ್ಧ ವಿವಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನ ಗೃಹ ಇಲಾಖೆಯು ಸಿಐಡಿ ತನಿಖೆಗೆ ವರ್ಗಾಯಿಸಿದೆ.
ಸಿಐಡಿಯ ಆರ್ಥಿಕ ಅಪರಾಧ ದಳಕ್ಕೆ ಪ್ರಕರಣ ವರ್ಗವಾಗಿದ್ದು, ವಿವಿಪುರಂ ಪೊಲೀಸರಿಂದ ಸಮಗ್ರ ಮಾಹಿತಿ ಪಡೆದು ತನಿಖೆ ಚುರುಕುಗೊಳಿಸಿದೆ. ಬೆಳಗಾವಿಯ ಗೋಕಾಕ್ ತಾಲೂಕಿನಲ್ಲಿರುವ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಫ್ಯಾಕ್ಟರಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್ ಜಾರಕಿಹೊಳಿ, ನಿರ್ದೇಶಕರಾದ ವಸಂತ್ ವಿ ಪಾಟೀಲ್ ಮತ್ತು ಶಂಕರ್ ಪವಾಡೆ ಅವರು ಕಂಪನಿಯ ನಿರ್ವಹಣೆ ಹಾಗೂ ವಿಸ್ತರಣೆಗಾಗಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಿಂದ 2013 ರಿಂದ 2017ರವರೆಗೆ ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ವಿಜಯಪುರದ ಸಹಕಾರಿ ಬ್ಯಾಂಕ್ಗಳಿಂದ ಹಂತ - ಹಂತವಾಗಿ 232.88 ಕೋಟಿ ಸಾಲ ಮಂಜೂರು ಮಾಡಿಸಿಕೊಂಡಿದ್ದರು.
ಸಾಲ ಪಾವತಿ ಮಾಡದ ಪರಿಣಾಮ 2023ರ ವೇಳೆಗೆ ಅದು 439.7 ಕೋಟಿಯಷ್ಟಾಗಿದೆ. ಸಾಲ ಮರು ಪಾವತಿ ಮಾಡದೆ ಬ್ಯಾಂಕ್ ವಿಧಿಸಿದ್ದ ಷರತ್ತುಗಳನ್ನು ಗಾಳಿಗೆ ತೂರಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ನ ಜನರಲ್ ಮ್ಯಾನೇಜರ್ ರಾಜಣ್ಣ ಎಂಬುವರು ನೀಡಿದ್ದ ದೂರಿನ ಮೇರೆಗೆ ವಿವಿಪುರಂ ಪೊಲೀಸರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಇಬ್ಬರು ನಿರ್ದೇಶಕರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಹುಕೋಟಿ ವಂಚನೆ ಪ್ರಕರಣ ಇದಾಗಿರುವುದರಿಂದ ತನಿಖೆಯನ್ನ ಸಿಐಡಿಗೆ ವಹಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಫ್ಯಾಕ್ಟರಿಗೆ 2013 ರಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ರಮೇಶ್ ಜಾರಕಿಹೊಳಿ, ಕಾರ್ಖಾನೆ ಸ್ಥಾಪನೆ ವಿಸ್ತರಣೆ ಹಾಗೂ ನಿರ್ವಹಣೆಗಾಗಿ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಸೇರಿ ಜಿಲ್ಲಾ ಸಹಕಾರಿ ಬ್ಯಾಂಕ್ಗಳಿಂದ ಹಂತ ಹಂತವಾಗಿ 233 ಕೋಟಿ ಸಾಲ ಮಂಜೂರು ಮಾಡಿಸಿಕೊಂಡಿದ್ದರು. ಸಾಲ ನೀಡುವ ಮುನ್ನ ಸಾಲ ಮರುಪಾವತಿಯಾಗುವವರೆಗೂ ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿರುವ ವ್ಯವಸ್ಥಾಪಕ ನಿರ್ದೇಶಕ ಅಥವಾ ನಿರ್ದೆಶಕರಾಗಲಿ ಅನುಮತಿ ಇಲ್ಲದೆ ಬದಲಾಯಿಸುವಂತಿಲ್ಲ ಎಂದು ಬ್ಯಾಂಕ್ ಷರತ್ತು ವಿಧಿಸಿದರೂ ಯಾವುದೇ ಮಾಹಿತಿ ನೀಡದೆ ಆಡಳಿತ ಮಂಡಳಿಯಿಂದ ಹೊರಬಂದು ಸಂಬಂಧವಿಲ್ಲದ ವ್ಯಕ್ತಿಗಳನ್ನ ನಿರ್ದೇಶಕರನ್ನಾಗಿ ಮಾಡಿ ಬ್ಯಾಂಕಿಗೆ ನಂಬಿಕೆ ದ್ರೋಹವೆಸಗಿದ್ದಾರೆ ಹಾಗೂ ಕೋಟ್ಯಂತರ ಸಾಲ ಪಡೆದು ಪಾವತಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ರಾಜಣ್ಣ ಉಲ್ಲೇಖಿಸಿದ್ದರು.
ಸೌಭಾಗ್ಯಲಕ್ಷ್ಮೀ ಶುಗರ್ಸ್ ವಂಚನೆ ಪ್ರಕರಣ ಸಿಐಡಿಗೆ ಬಂದಿದ್ದು ತನಿಖೆಯನ್ನ ಆರ್ಥಿಕ ಅಪರಾಧ ವಿಭಾಗ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರನ್ನ ವಿಚಾರಣೆ ನಡೆಸಲಾಗುವುದು ಎಂದು ಸಿಐಡಿ ಡಿಜಿಪಿ ಎಂ.ಎಂ.ಸಲೀಂ ಈಟಿವಿ ಭಾರತ್ಗೆ ಖಚಿತಪಡಿಸಿದ್ದಾರೆ.