ಬೆಳಗಾವಿ : ಭೀಕರ ಬರಗಾಲದಿಂದ ಈ ಊರಿನ ಜನ ತತ್ತರಿಸಿ ಹೋಗಿದ್ದಾರೆ. ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ಇಡೀ ಊರಿಗೆ ಊರೇ ಗುಳೆ ಹೋಗಿದೆ. ಜನರಿಲ್ಲದೆ ಊರು ಬಿಕೋ ಎನ್ನುತ್ತಿದೆ. ಗ್ಯಾರಂಟಿ ಗುಂಗಲ್ಲಿ ಇರೋ ಜನಪ್ರತಿನಿಧಿಗಳು ನೋಡಬೇಕಾದ ಸ್ಟೋರಿ ಇಲ್ಲಿದೆ.
ಉಚಿತ ಅಕ್ಕಿ, ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್, 2 ಸಾವಿರ ರೂಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ನೀಡುತ್ತಿದೆ. ಆದರೆ, ದುಡಿಯವ ಕೈಗಳಿಗೆ ಕೆಲಸ ಸಿಗದ ಹಿನ್ನೆಲೆ ಚಿಂತಾಕ್ರಾಂತರಾದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ರಾಮಾಪುರ ತಾಂಡಾ-2ರ ಜನ ಗುಳೆ ಹೋಗಿದ್ದಾರೆ. ವೃದ್ಧರು, ಮಕ್ಕಳನ್ನು ಗ್ರಾಮದಲ್ಲೇ ಬಿಟ್ಟು ಕೆಲಸಕ್ಕಾಗಿ ಬೆಳಗಾವಿ, ಗೋವಾ, ಬೆಂಗಳೂರು, ಹೈದರಾಬಾದ್, ಹುಬ್ಬಳ್ಳಿ-ಧಾರವಾಡ ಸೇರಿ ದೊಡ್ಡ ದೊಡ್ಡ ನಗರಗಳಿಗೆ ತೆರಳಿದ್ದಾರೆ. ಗ್ರಾಮದ ಬಹುತೇಕ ಮನೆಗಳಿಗೆ ಬೀಗ ಹಾಕಿದ್ದು, ಇಡೀ ಊರು ಜನ ಇಲ್ಲದೇ ಬಣಗುಡುತ್ತಿರುವ ದೃಶ್ಯ ಕಂಡು ಬಂದಿದೆ.
ಇಡೀ ರಾಜ್ಯದಲ್ಲಿ ಮುಂಗಾರು, ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ಕೃಷಿ ಅವಲಂಬಿಸಿದ ಗ್ರಾಮೀಣ ಭಾಗದಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ನಗರ ಪ್ರದೇಶಕ್ಕೆ ಹೋಗುವುದು ಇಲ್ಲಿನ ಜನರಿಗೆ ಅನಿವಾರ್ಯವಾಗಿದೆ. ರಾಮಾಪುರ ತಾಂಡಾದಲ್ಲಿ 550 ಜನಸಂಖ್ಯೆ ಇದೆ. ಸದ್ಯ ಗ್ರಾಮದಲ್ಲಿ ಉಳಿದಿರೋದು ಕೇವಲ 40-50 ಜನ. ವೃದ್ಧರು, ವಿಕಲಾಂಗರು ಹಾಗೂ ಕೆಲ ಮಕ್ಕಳನ್ನು ಬಿಟ್ಟು ಉಳಿದ ಎಲ್ಲರೂ ಗುಳೆ ಹೋಗಿದ್ದಾರೆ.
ಹ್ಯಾಂಗೋ ದಿನದೂಡುತ್ತಿದ್ದೇವೆ : ಗ್ರಾಮದ ಹಿರಿಯ ಪಾಟೀಲ ಕೇಶಪ್ಪ ರಜಪೂತ ಮಾತನಾಡಿ, ''ಮಳೆ-ಬೆಳೆ ಇಲ್ಲ. ಕೆಲಸವೂ ಇಲ್ಲ. ಹಾಗಾಗಿ, ಊರಿನ ಎಲ್ಲರೂ ದುಡಿಯೋಕೆ ಅಂತಾ ಬೆಂಗಳೂರು, ಬೆಳಗಾವಿ, ಧಾರವಾಡ, ಗೋವಾಗೆ ಹೋಗಿದ್ದಾರೆ. ನಮಗೆ ಕೆಲಸ ಮಾಡಲು ಆಗೋದಿಲ್ಲ. ಹಾಗಾಗಿ, ವಯಸ್ಸಾದವರು ಮಾತ್ರ ಇಲ್ಲಿದ್ದು, ಹ್ಯಾಂಗೋ ದಿನದೂಡುತ್ತಿದ್ದೇವೆ'' ಎಂದು ಅಳಲು ತೋಡಿಕೊಂಡರು.
ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದ್ದರಿಂದ ಜಿಲ್ಲೆಯ 15 ತಾಲೂಕು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 3.53 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಶೇ. 13ರಷ್ಟು ಮಳೆ ಕೊರತೆ ಆಗಿತ್ತು. ಹಿಂಗಾರಿನಲ್ಲಿ ಶೇ. 43ರಷ್ಟು ಮಳೆಯ ಅಭಾವ ಹಿನ್ನೆಲೆಯಲ್ಲಿ ಸಂಕಷ್ಟ ಎದುರಾಗಿದೆ. ಇನ್ನು ರಾಮಾಪುರ ತಾಂಡದ ಶಾಲೆಯಲ್ಲಿ ಮಕ್ಕಳ ಹಾಜರಾತಿಯಲ್ಲಿ ತೀವ್ರ ಕುಸಿತವಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಕೇವಲ 15 ಜನ ಮಕ್ಕಳು ಮಾತ್ರ ಶಾಲೆಗೆ ಹೋಗುತ್ತಿದ್ದಾರೆ. ಇನ್ನುಳಿದ ಮಕ್ಕಳು ತಂದೆ ತಾಯಿ ಜೊತೆಗೆ ಅವರೂ ಕೆಲಸಕ್ಕೆ ಹೋಗಿದ್ದಾರೆ ಎಂದರು.
ಊರು ಬಿಡುವ ಸ್ಥಿತಿ ನಿರ್ಮಾಣವಾಗುತ್ತದೆ: ಗ್ರಾಮದ ಹಿರಿಯ ವಿಠಲ ಕೃಷ್ಣಪ್ಪ ರಜಪೂತ ಮಾತನಾಡಿ, ''ನಮ್ಮೂರಲ್ಲಿ ದುಡಿಯೋಕೆ ಕೆಲಸ ಇಲ್ಲ. ಹಾಗಾಗಿ, ಎಲ್ಲರೂ ಗುಳೆ ಹೋಗಿದ್ದಾರೆ. ಈ ವರ್ಷವೂ ಮಳೆ ಆಗದಿದ್ದರೆ ಈಗ ಇರುವ ನಾವು ಕೂಡ ಊರು ಬಿಡುವ ಸ್ಥಿತಿ ನಿರ್ಮಾಣವಾಗುತ್ತದೆ'' ಎಂದು ಹೇಳಿದರು.
ಈ ಬಗ್ಗೆ ರಾಮದುರ್ಗ ಶಾಸಕ ಮಹಾದೇವಪ್ಪ ಪಟ್ಟಣ ಪ್ರತಿಕ್ರಿಯೆ ನೀಡಿದ್ದು, ''ರಾಮಾಪುರ ತಾಂಡಾ ಜನ ಉದ್ಯೋಗ ಅರಸಿ ಗುಳೆ ಹೋಗಿರುವುದು ಗಮನಕ್ಕೆ ಬಂದಿದೆ. ಗುಳೆ ಹೋಗಲು ಕಾರಣವಾಗಿರುವ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವಿಶೇಷ ಕ್ರಮ ಕೈಗೊಳ್ಳಲಾಗುವುದು'' ಎಂದು ಭರವಸೆ ನೀಡಿದರು.
ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ: ''ಈ ವಿಷಯ ನನ್ನ ಗಮನಕ್ಕೆ ಬಂದಿದೆ. ತಕ್ಷಣ ಉಪತಹಶೀಲ್ದಾರ್, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತಾಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ಕೊಡುತ್ತೇನೆ. ಖುದ್ದು ನಾನು ಕೂಡ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಅವಲೋಕಿಸಿ, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ'' ಎಂದು ರಾಮದುರ್ಗ ತಹಶೀಲ್ದಾರ್ ಸುರೇಶ ಚವಲರ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಬರ ಪರಿಹಾರದ ಹಣ ಬಿಡುಗಡೆಗೆ ಆಗ್ರಹ: ಸಿಎಂ ಕಚೇರಿಗೆ ಬೀಗ ಹಾಕಲು ಮುಂದಾದ ಬಿಜೆಪಿ ನಾಯಕರು ವಶಕ್ಕೆ