ಧಾರವಾಡ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಎರಡು ದಿನ ಬಾಕಿ ಇರುವಾಗಲೇ ಧಾರವಾಡದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಧಾರವಾಡ ತಾಲೂಕಿನ ಕಲಕೇರಿ ಗ್ರಾಮದಲ್ಲಿ ವಿಗ್ರಹಗಳು ಪತ್ತೆಯಾಗಿವೆ. ಇನ್ನು ಇವು ಶ್ರೀರಾಮ-ಲಕ್ಷ್ಮಣ ವಿಗ್ರಹಗಳೆಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಧಾರವಾಡ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಕೆರೆ ದಂಡೆಯಲ್ಲಿ ಗ್ರಾಪಂ ವ್ಯಾಪ್ತಿಗೆ ಸೇರಿರುವ ಜಾಗದಲ್ಲಿ ವಿಗ್ರಹಗಳು ಪತ್ತೆಯಾಗಿವೆ. ಮೊದಮೊದಲು ಅಗೆಯಲು ಆರಂಭಿಸಿದಾಗ ಮೇಲ್ಭಾಗದಲ್ಲಿ ನಂದಿ ಚಿತ್ರ ಕಂಡುಬಂದಿದೆ. ಮತ್ತೆ ಜೆಸಿಬಿ ಮೂಲಕ ಅಗೆದಾಗ ಶಿಲ್ಪಕಲಾ ಲಾಂಛನ ಸಿಕ್ಕಿವೆ. ಕಲ್ಲಿನಲ್ಲಿ ಬಿಲ್ಲುದಾರಿಗಳ ಕೆತ್ತನೆಯಿದೆ. ಮೇಲ್ಭಾಗದಲ್ಲಿ ನಂದಿ ವಿಗ್ರಹ ಕೆತ್ತನೆ ಬಿಲ್ಲುದಾರಿಗಳನ್ನು ರಾಮ, ಲಕ್ಷ್ಮಣ ಜೊತೆಗಿದ್ದವರನ್ನು ಸೀತೆ, ಆಂಜನೇಯ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಮೇಲ್ಭಾಗದಲ್ಲಿ ನಂದಿ ಜೊತೆಗೆ ಶಿವ-ಪಾರ್ವತಿ ವಿಗ್ರಹ ಕೆತ್ತನೆ ಕೂಡ ಇದ್ದು, ವಿಗ್ರಹ ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.
ಸಿಕ್ಕಿರುವ ವಿಗ್ರಹಕ್ಕೆ ಸ್ಥಳೀಯರು ಪೂಜೆ ಸಲ್ಲಿಸಿದ್ದು, ಜ. 22 ರಂದು ಗ್ರಾಮದಲ್ಲಿ ವಿಗ್ರಹ ಸ್ಥಾಪನೆಗೆ ನಿರ್ಧಾರ ಮಾಡಿದ್ದಾರೆ. ಅಲ್ಲೇ ರಾಮ ಮಂದಿರ ಕಟ್ಟಲು ಸಹ ನಿರ್ಧರಿಸಿದ್ದಾರೆ. ಬನವಾಸಿ ಕದಂಬರ ಆಳ್ವಿಕೆಯ ಶಿಲಾ ಕೆತ್ತನೆ ಇರಬಹುದೆಂಬ ಸಂಶಯ ಕೂಡ ವ್ಯಕ್ತವಾಗಿದೆ. ಬನವಾಸಿ ಕದಂಬರ ಕಾಲದಲ್ಲಿ ಈ ಭಾಗದಲ್ಲಿ ಸೈನಿಕರು ಬೀಡು ಬಿಟ್ಟಿದ್ದ ಚರಿತ್ರೆಯಿದೆ. ಆಗಾಗ ಈ ಭಾಗದಲ್ಲಿ ಅರಣ್ಯದಲ್ಲಿ ಶಿಲಾಮೂರ್ತಿಗಳು ಸಿಗುತ್ತಿವೆ. ಆದರೆ ಈ ಹಿಂದೆ ಬಿಲ್ಲುದಾರಿ ಮೂರ್ತಿ ಸಿಕ್ಕಿರಲಿಲ್ಲಾ. ಇದೇ ಮೊದಲ ಬಾರಿಗೆ ಬಿಲ್ಲುದಾರಿ ವಿಗ್ರಹಗಳಿರುವ ಶಿಲ್ಪ ಪತ್ತೆಯಾಗಿದೆ. ಪುರಾತತ್ವ ಇಲಾಖೆಯಿಂದ ಸಂಶೋಧನೆ ನಡೆದ ಬಳಿಕವೇ ಸತ್ಯಾಸತ್ಯತೆ ಗೊತ್ತಾಗಲಿದೆ. ಆದರೆ ಸದ್ಯಕ್ಕೆ ಶ್ರೀರಾಮ-ಲಕ್ಷ್ಮಣ ಎಂದೇ ಜನರು ನಂಬಿ ವೀಕ್ಷಣೆಗೆ ವಿವಿಧ ಗ್ರಾಮಗಳ ಜನರು ಬರುತ್ತಿದ್ದಾರೆ.
ಜ.22ಕ್ಕೆ ಉತ್ಸವ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಶಿಲೆ ಇದ್ದ ಸ್ಥಳದಲ್ಲಿ ಹಾವುಗಳು ಓಡಾಡಿಕೊಂಡಿದ್ದವು. ನಾಗರ ಹಾವುಗಳು ಪದೇ ಪದೇ ಅದೇ ಸ್ಥಳದಲ್ಲಿ ಸುತ್ತಾಟ ನಡೆಸಿದ್ದವು ಎಂದು ಗ್ರಾಮಸ್ಥರು ಹೇಳುತ್ತಾರೆ. ಇದರಿಂದ ಸಂಶಯಗೊಂಡು ನೆಲ ಅಗೆದಾಗ ಮೂರ್ತಿ ಸಿಕ್ಕಿದೆ. ಸುಮಾರು 3 ಅಡಿಯಷ್ಟು ಎತ್ತರ ಇರುವ ಶಿಲಾಮೂರ್ತಿ ಶಿವಪಾರ್ವತಿ ಕೆಳಗೆ ಬಿಲ್ಲುದಾರಿ ಮೂರ್ತಿಗಳ ಕೆತ್ತನೆಯಿದೆ.