ಬಳ್ಳಾರಿ: ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬಳ್ಳಾರಿಗೆ ಆಗಮಿಸಿದ ನಾಸೀರ್ ಹುಸೇನ್ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಸಚಿವ ಬಿ.ನಾಗೇಂದ್ರ, ಶಾಸಕ ಭರತ್ ರೆಡ್ಡಿ ಸೇರಿದಂತೆ ಅಭಿಮಾನಿಗಳು ನಾಸೀರ್ ಹುಸೇನ್ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಬಳಿಕ ತೆರದ ವಾಹನದಲ್ಲಿ ಮೆರವಣಿಗೆಗೆ ಮಾಡಲಾಯಿತು. ಬಳ್ಳಾರಿಯ ಸಂಗಮ್ ಸರ್ಕಲ್ ನಿಂದ ಆರಂಭವಾದ ಮೆರವಣಿಗೆ ರಾಯಲ್ ವೃತ್ತ ಸೇರಿದಂತೆ ಪ್ರಮುಖ ವೃತ್ತದಲ್ಲಿ ಸಾಗಿತು.
ಬಿಜೆಪಿ ಪ್ರತಿಭಟನೆ: ಮತ್ತೊಂದೆಡೆ, ರಾಜ್ಯಸಭಾ ಸದಸ್ಯರಾದ ಬಳಿಕ ಸಂಭ್ರಮಾಚರಣೆ ವೇಳೆ ವಿಧಾನಸಭೆಯಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಪ್ರಕರಣ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಗರದ ರಾಯಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಗೋ ಬ್ಯಾಕ್ ನಾಸೀರ್ ಹುಸೇನ್ ಎಂದು ಘೋಷಣೆ ಕೂಗಿದರು.
ನಾಸೀರ್ ಹುಸೇನ್ ಅವರ ಮೆರವಣಿಗೆಗೆ ಪರವಾನಗಿ ನೀಡಿದ್ದಕ್ಕೆ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದರು. ತಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬಂದಾಗ ಪರವಾನಗಿ ನೀಡದೆ, ಇವರಿಗೆ ನೀಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.