ಮಹಾಕುಂಭ ನಗರ (ಉತ್ತರ ಪ್ರದೇಶ) : ಇಂದಿನಿಂದ ದೇಶದ ಮಹಾಕುಂಭ ಮೇಳ ಆರಂಭವಾಗಲಿದೆ. ಉತ್ತರ ಪ್ರದೇಶದ ಮಹಾಕುಂಭ ನಗರದಲ್ಲಿ ಈ ಕುಂಭ ಮೇಳಕ್ಕೆ ಚಾಲನೆ ಸಿಗಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 40 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.
ಈ ಮಧ್ಯೆ ಉತ್ತರ ಪ್ರದೇಶ ಸರ್ಕಾರ ಮಹಾಕುಂಭ ಮೇಳಕ್ಕೆ ಆಗಮಿಸುವ ಜನರಿಗೆ ಒಂದು ಸುವರ್ಣಾವಕಾಶವನ್ನು ಕಲ್ಪಿಸಿದೆ. ಅದು ಕೇವಲ 1,296 ರೂಪಾಯಿಯಲ್ಲಿ ಆಕಾಶದಲ್ಲಿ ಹೆಲಿಕಾಪ್ಟರ್ನಲ್ಲಿ ಹಾರಾಡಬಹುದು ಎಂದು ಉತ್ತರ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಿಕೆಟ್ ದರ ಕಡಿತ ಮಾಡಿದ ಪ್ರವಾಸೋದ್ಯಮ ಇಲಾಖೆ ; ಈ ಮೊದಲು 3000 ಸಾವಿರ ರೂಪಾಯಿ ಇದ್ದ ಹೆಲಿಕಾಪ್ಟರ್ ಪ್ರಯಾಣ ದರವವನ್ನು ಇದೀಗ ಪ್ರಯಾಣಿಕರನ್ನು ಸೆಳೆಯಲು ಅರ್ಧಕ್ಕಿಂತ ಕಡಿಮೆ ದರದಲ್ಲಿ ಆಗಸದಲ್ಲಿ ಹಾರಾಡುತ್ತ ಪ್ರಯಾಗರಾಜ್ ನಗರದ ವೈಮಾನಿಕ ದೃಶ್ಯವನ್ನು 7 ರಿಂದ 8 ನಿಮಿಷ ಕಾಲ ವೀಕ್ಷಿಸುವ ಅವಕಾಶವನ್ನು ಕಲ್ಪಿಸಿರುವುದಾಗಿ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ; ಹೀಗೆ ಕಾಪ್ಟರ್ನಲ್ಲಿ ಪ್ರಯಾಣಿಸಲು ಬಯಸುವವರಿಗೆ ಆನ್ಲೈನ್ www.upstdc.co.in ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು ಎಂದು ಇದರ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸರ್ಕಾರದ ಪವನ್ ಹನ್ಸ್ ಮಾಹಿತಿ ನೀಡಿದ್ದಾರೆ.
ಈ ಪ್ರಯಾಣ ನಿರಂತರವಾಗಿ ನಡೆಯಲಿದೆ. ಆದ್ರೆ ಪ್ರತಿ ಬಾರಿ ಹವಾಮಾನವನ್ನು ಅವಲೋಕಿಸಿದ ಬಳಿಕ ಪ್ರಯಾಣವನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲದೆ, ಈ ಮಹಾ ಸಮ್ಮೇಳನದ ಪ್ರದೇಶದಲ್ಲಿ ಜಲಸಾಹಸ ಕ್ರೀಡೆಗಳನ್ನು ಸಹ ನಡೆಸಲು ತಯಾರಿಗಳು ನಡೆದಿವೆ ಎಂದು ಯುಪಿಯ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.
ದ್ರೋನ್ ಶೋ ಸೇರಿ ವಿವಿಧ ಕಾರ್ಯಕ್ರಮಗಳು ಇದೇ ಜನವರಿ 24 ರಿಂದ 26ರ ವರೆಗೆ ದ್ರೋನ್ ಪ್ರದರ್ಶನ ನಡೆಯಲಿದ್ದು, ಲೇಸರ್ ಶೋ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಸಹ ಜರುಗಲಿವೆ.
ಶಂಕರ್ ಮಹಾದೇವನ್ ಸಂಗೀತ ರಸದೌತಣ ಖ್ಯಾತ ಗಾಯಕ ಶಂಕರ್ ಮಹಾದೇವನ್ ಅವರಿಂದ ಇಲ್ಲಿನ ಗಂಗಾ ಪಂಡಲ್ನಲ್ಲಿ ಜ. 16 ರಂದು ಸಂಗೀತ ಕಾರ್ಯಕ್ರಮ ನಡೆಯಲಿದೆ.
ಈ ಮಹಾಕುಂಭ ಮೇಳ ಇಂದಿನಿಂದ ಶುರುವಾಗಿ ಮುಂದಿನ ಫೆಬ್ರವರಿ 24 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅದ್ಧೂರಿ ತೆರೆ ಬೀಳಲಿದೆ.
ಇದನ್ನೂ ಓದಿ: ಮಹಾಕುಂಭ ಮೇಳ: ಯಾತ್ರಾರ್ಥಿಗಳಿಗೆ ದೇವಲೋಕದ ಅನುಭವ ನೀಡಲಿವೆ 30 ಪೌರಾಣಿಕ ಕಮಾನುಗಳು