ಬೆಂಗಳೂರು: ಕಾಂಗ್ರೆಸ್ನವರು ದೆಹಲಿಗೆ ಬರುತ್ತಿರುವುದು ಸಂತಸ, ಅವರು ಒಪ್ಪಿದರೆ ಕೇಂದ್ರ ಸಚಿವರನ್ನು ಭೇಟಿ ಮಾಡಿಸುತ್ತೇವೆ ಎಂದು ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಕುಟುಕಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಪಕ್ಷದ ವಕ್ತಾರ ಪಿ.ರಾಜೀವ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು, ಫೆ.6 ರಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ನೇತೃತ್ವದ ಶಾಸಕರ ತಂಡ ದೆಹಲಿಗೆ ಬರುತ್ತಿದೆ. ಕೇಂದ್ರದ ಅನುದಾನ ತಾರತಮ್ಯ ಸಂಬಂಧ ಪ್ರತಿಭಟನೆಗೆ ಬರುತ್ತಿದ್ದಾರೆ. ಕಾಂಗ್ರೆಸ್ನವರು ಬರ್ತಿರೋದು ಸಂತಸ, ಅವರು ಒಪ್ಪಿದರೆ ನಾವು ಅವರನ್ನು ಕೇಂದ್ರ ಸಚಿವರ ಬಳಿ ಭೇಟಿ ಮಾಡಿಸ್ತೇವೆ. ಆದ್ರೆ ಅದಕ್ಕೂ ಮೊದಲು ಕಾಂಗ್ರೆಸ್ ನವರು ತಮ್ಮ ಗ್ಯಾರಂಟಿ ಸ್ಕೀಂಗಳ ಬಗ್ಗೆ ಸ್ಪಷ್ಟತೆ ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿಲ್ಲ. ಅಭಿವೃದ್ಧಿ ಯೋಜನೆಗಳನ್ನು ಈ ಸರ್ಕಾರ ಶುರು ಮಾಡಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ ಆಗಿದೆ. ಗ್ಯಾರಂಟಿಗಳನ್ನು ಕೊಡಬೇಕು ಅಂದ್ರೆ ಲೋಕಸಭೆಯಲ್ಲಿ ವೋಟ್ ಮಾಡಿ, ಇಲ್ಲಾಂದ್ರೆ ಗ್ಯಾರಂಟಿ ನಿಲ್ಲಿಸ್ತೇವೆ ಅಂತಾ ಅವರ ಶಾಸಕರೊಬ್ಬರು ಹೇಳ್ತಾರೆ. ನಮ್ಮ ಸರ್ಕಾರ ರಾಜ್ಯದಲ್ಲಿ ಇದ್ದಾಗ ಪಕ್ಷಾತೀತವಾಗಿ ಶಾಸಕರಿಗೆ ಅನುದಾನ ಹಂಚಿಕೆ ಮಾಡಿದ್ದೆವು. ಆದ್ರೆ ಈಗ ಕಾಂಗ್ರೆಸ್ ನವರು ಅವರ ಪಕ್ಷದ ಶಾಸಕರಿಗೇ ಅನುದಾನ ಕೊಡ್ತಿಲ್ಲ. ಅನುದಾನ ಕೊಡ್ತಿಲ್ಲ ಅಂತ ಅವರ ಪಕ್ಷದ ಹಿರಿಯ ಶಾಸಕರು ಅಸಮಾಧಾನಗೊಂಡು ರಾಜೀನಾಮೆ ಕೊಡಲು ಮುಂದಾಗಿದ್ರು. ಕಾಂಗ್ರೆಸ್ ಸರ್ಕಾರ ಅನುದಾನ ತಾರತಮ್ಯದ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಲೆಹರ್ ಸಿಂಗ್ ಒತ್ತಾಯಿಸಿದರು.
ಅಕ್ರಮ ಗಣಿಗಾರಿಕೆ ಉಪಸಮಿತಿ ವರದಿ ಕ್ರಮ ಯಾಕಿಲ್ಲ: ಹೆಚ್.ಕೆ. ಪಾಟೀಲ್ ಉಪ ಸಮಿತಿ ಅಕ್ರಮ ಗಣಿಗಾರಿಕೆಯಿಂದ ಅಂದಾಜು 1.43 ಲಕ್ಷ ಕೋಟಿ ರೂ. ಬಾಕಿ ಬರಬೇಕಿದೆ ಎಂದು ಹೇಳಿದೆ. 10 ವರ್ಷಗಳ ಹಿಂದೆ ಸಿದ್ದರಾಮಯ್ಯನವರು (2013ರಲ್ಲಿ) ಭರವಸೆ ನೀಡಿದಂತೆ ಈ ಬಾಕಿಯನ್ನು ವಸೂಲಿ ಮಾಡಿದರೆ, ಗ್ಯಾರಂಟಿ ಯೋಜನೆಗಳನ್ನು ಪೂರ್ಣ ಜಾರಿಗೆ ತರಲು ಸರ್ಕಾರ ಸಾಕಷ್ಟು ಹಣ ಹೊಂದಿಸಬಹುದು ಎಂದು ತಿಳಿಸಿದರು.
ನೀವು ಭರವಸೆ ನೀಡಿದಂತೆ ಈ ಬಾಕಿಯನ್ನು ಮೊದಲು ವಸೂಲಿ ಮಾಡಿದ ನಂತರ ಅಗತ್ಯವಿದ್ದಲ್ಲಿ ಕೇಂದ್ರದಿಂದ ಹೆಚ್ಚುವರಿ ಅನುದಾನ ಪಡೆಯಲು ನಿಮ್ಮೊಂದಿಗೆ ಬರುವಂತೆ, ಬಿಜೆಪಿ ಶಾಸಕರನ್ನು ನಾನು ಒತ್ತಾಯಿಸುತ್ತೇನೆ. ಎಚ್.ಕೆ. ಪಾಟೀಲ್ ಸಂಪುಟ ಉಪಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿರುವಂತೆ ಅಕ್ರಮ ಗಣಿಗಾರಿಕೆಯ ದಂಡ ವಸೂಲಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕು. ಕೇಂದ್ರದಿಂದ ಅನುದಾನ ತಾರತಮ್ಯ ಆಗ್ತಿಲ್ಲ. ನಿರಂತರವಾಗಿ ಅನುದಾನ ಬರುತ್ತಿದೆ. ಆದ್ರೆ ಕೇಂದ್ರದಿಂದ ಬರ್ತಿರುವ ಹಣದ ಸಮರ್ಪಕ ಬಳಕೆ ಆಗ್ತಿಲ್ಲ. ಬರ ಪರಿಹಾರವನ್ನೂ ಸಹ ಕೇಂದ್ರ ಸರ್ಕಾರ ಕೊಡಲಿದೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರನ್ನು ಬಿಡುಗಡೆ ಮಾಡಿ: ಸಂಸದ ಡಿ.ಕೆ. ಸುರೇಶ್ ವಿರುದ್ಧ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಹಲ್ಲೆ ಆರೋಪ ವಿಚಾರಕ್ಕೆ ಮಾಜಿ ಶಾಸಕ ಪಿ. ರಾಜೀವ್ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ರಾಕ್ಷಸ ಸರ್ಕಾರ ಇದೆ. ರಾಷ್ಟ್ರದ ಐಕ್ಯತೆಗೆ ಧಕ್ಕೆ ಮಾಡುವ ಹೇಳಿಕೆ ಕೊಡೋರು ಈ ರಾಜ್ಯದಲ್ಲಿ ಸುರಕ್ಷಿತರಾಗಿರ್ತಾರೆ. ಆದ್ರೆ ಅದನ್ನು ಖಂಡಿಸಿದವರಿಗೆ ಈ ಸರ್ಕಾರ ಪೊಲೀಸರ ಮೂಲಕ ಹಲ್ಲೆ ನಡೆಸಿದೆ. ಶಾಂತಿಯುತ ಪ್ರತಿಭಟನೆ ಮಾಡ್ತಿದ್ದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿದರು.
ಪೊಲೀಸರು ನಮ್ಮ ಕಾರ್ಯಕರ್ತರ ಮೇಲೆ ತೀವ್ರ ಹಲ್ಲೆ ಮಾಡಿ ಬಂಧಿಸಿ ಕರೆದೊಯ್ದಿದ್ದಾರೆ. ಕಾಂಗ್ರೆಸ್ ಸರ್ಕಾರ ಮೊದಲು ತನ್ನ ಸಂಸದನಿಗೆ ಬುದ್ಧಿ ಮಾತು ಹೇಳಲಿ. ಅದರ ಬದಲು ದೇಶ ವಿರೋಧಿ ಹೇಳಿಕೆ ಕೊಟ್ಟ ಸಂಸದರು ರಕ್ಷಣೆ ಮಾಡುವಂಥ ನೀಚ ಕೆಲಸ ಮಾಡಬಾರದು. ಬಿಜೆಪಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ಹಲ್ಲೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಲಿದೆ. ಕೂಡಲೇ ಬಿಜೆಪಿ ಕಾರ್ಯಕರ್ತರನ್ನು ಬಿಡುಗಡೆ ಮಾಡಲಿ. ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಲಿ. ಬಿಜೆಪಿ ಕಾರ್ಯಕರ್ತರ ಅಸಹನೆಯ ಬೆಂಕಿಗೆ ಕಾಂಗ್ರೆಸ್ ಸುಟ್ಟು ಹೋಗಲಿದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂಓದಿ:ರಾಜ್ಯದಲ್ಲಿ ನೂರು ರಾಮಮಂದಿರ ಜೀರ್ಣೋದ್ಧಾರ; ಸರ್ಕಾರದ ಕ್ರಮ ಸ್ವಾಗತಿಸಿದ ಬಿ ವೈ ವಿಜಯೇಂದ್ರ