ಅಮೋಘ ಗಾಯನದಿಂದ ವಿಶ್ವದೆಲ್ಲೆಡೆ ಮನೆಮಾತಾಗಿದ್ದ ಖ್ಯಾತ ಗಾಯಕ ರಾಜು ಅನಂತಸ್ವಾಮಿ ಅವರ ನೆನಪಿನಲ್ಲೊಂದು ಸುಗಮ ಸಂಗೀತ ಸಂಜೆ 'ರಾಜು ದಿ ಲೆಜೆಂಡ್' ಎಂಬ ಕಾರ್ಯಕ್ರಮವು ಏಪ್ರಿಲ್ 19ರಂದು ಕೋಣನಕುಂಟೆ ಬಳಿಯ ಶ್ರೀಹರಿ ಖೋಡೆ ಆಡಿಟೋರಿಯಂನಲ್ಲಿ ನಡೆಯಲಿದೆ. ಹೆಸರಾಂತ ಡ್ರಮರ್ ಮಂಜನಾಥ್ ಸತ್ಯಶೀಲ್ ಹಾಗೂ ಖ್ಯಾತ ಗಾಯಕಿ ಅನನ್ಯ ಭಟ್ ಈ ಕಾರ್ಯಕ್ರಮ ಆಯೋಜಿಸಿದ್ದಾರೆ.

ಈ ಬಗ್ಗೆ ಗಾಯಕಿ ಅನನ್ಯ ಭಟ್ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ಸಂಗೀತ ನಿರ್ದೇಶಕರಾದ ಪ್ರವೀಣ್ ಡಿ.ರಾವ್, ಪ್ರವೀಣ್, ಪ್ರದೀಪ್ ಹಾಗೂ ಗಾಯಕಿ ದಿವ್ಯ ರಾಘವನ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ರಾಜು ಅನಂತಸ್ವಾಮಿ ಅವರ ಹಾಡುಗಳನ್ನು ಕೇಳಿ ಬೆಳೆದ ನನಗೆ ಅವರ ಹೆಸರಿನಲ್ಲೊಂದು ಕಾರ್ಯಕ್ರಮ ಮಾಡಬೇಕು ಎನಿಸಿತು. ಈ ಕುರಿತು ಸ್ನೇಹಿತರಾದ ಡ್ರಮ್ಮರ್ ಮಂಜುನಾಥ್ ಸತ್ಯಶೀಲ್ ಅವರ ಬಳಿ ಹೇಳಿದೆ. ಅವರ ಯೋಚನೆ ಕೂಡ ಇದೇ ಆಗಿತ್ತು. ನಾವಿಬ್ಬರು ಈ ಸಮಾರಂಭವನ್ನು ಆಯೋಜಿಸಲು ಮುಂದಾದೆವು. ಈ ಕುರಿತು ಎಲ್ಲರೊಡನೆ ಚರ್ಚಿಸಿದಾಗ ರಾಜು ಅನಂತಸ್ವಾಮಿ ಅವರ ಹತ್ತಿರದ ಒಡನಾಡಿಗಳು ಹಾಗೂ ಅವರ ಶಿಷ್ಯರು ನಮ್ಮ ಪ್ರಯತ್ನಕ್ಕೆ ಬೆಂಬಲವಾಗಿ ನಿಂತರು ಎಂದು ಗಾಯಕಿ ಅನನ್ಯ ಭಟ್ ತಿಳಿಸಿದರು.

ಶ್ರೀನಿವಾಸ ಜಿ.ಕಪ್ಪಣ್ಣ ಹಾಗೂ ಪ್ರವೀಣ್ ಡಿ.ರಾವ್ ಅವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಈ ಸಮಾರಂಭ ನಡೆಯಲಿದೆ. ಏಪ್ರಿಲ್ 19ರಂದು ರಾಜು ಅನಂತಸ್ವಾಮಿ ಅವರ ಹುಟ್ಟುಹಬ್ಬ. ಹಾಗಾಗಿ ಅದೇ ದಿನ 'ರಾಜು ದಿ ಲೆಜೆಂಡ್' ಹೆಸರಿನಲ್ಲಿ ರಾಜು ಅನಂತಸ್ವಾಮಿ ಅವರ ಹಾಡುಗಳ ಸುಗಮ ಸಂಗೀತ ಸಂಜೆ ಕೋಣನಕುಂಟೆಯ ಶ್ರೀಹರಿ ಖೋಡೆ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ನಾಡಿನ ಅನೇಕ ಹೆಸರಾಂತ ಕಲಾವಿದರು ಹಾಗೂ ಗಾಯಕರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ರಾಜು ಅನಂತಸ್ವಾಮಿ ಅವರ 18 ಹಾಡುಗಳ ಗಾಯನವು ಸುಪ್ರಸಿದ್ದ ಗಾಯಕರು ಹಾಗೂ ಗಾಯಕಿಯರ ಕಂಠಸಿರಿಯಲ್ಲಿ ಮೊಳಗಲಿದೆ. ಆಧುನಿಕ ತಂತ್ರಜ್ಞಾನ AI ಮೂಲಕ ರಾಜು ಅನಂತಸ್ವಾಮಿ ಅವರ ಕುರಿತಾದ ವಿಷುಯಲ್ಸ್ ಪ್ರದರ್ಶನವಾಗುತ್ತದೆ. ಮೊದಲು ಈ ಸಮಾರಂಭವನ್ನು ಸಣ್ಣಮಟ್ಟದಲ್ಲಿ ಮಾಡಬೇಕೆಂದುಕೊಂಡೆವು. ಈಗ ದೊಡ್ಡಮಟ್ಟದಲ್ಲಿ ರಾಜ್ಯದಲ್ಲೇ ಅತಿದೊಡ್ಡ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ರಾಜು ಅನಂತಸ್ವಾಮಿ ಅವರ ಅಭಿಮಾನಿಗಳು ಹಾಗೂ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಈ ಮೂಲಕ ವಿನಂತಿ ಮಾಡುತ್ತೇವೆ. ಟಿಕೆಟ್ ಬೆಲೆ ಕೇವಲ 299 ರೂ.ಗೆ ನಿಗದಿ ಮಾಡಲಾಗಿದ್ದು, ಬುಕ್ ಮೈ ಶೋನಲ್ಲಿ ದೊರೆಯಲಿದೆ ಎಂದರು ಅನನ್ಯ ಭಟ್.
ಗುರುವಿಗಾಗಿ ಈ ಕಾರ್ಯಕ್ರಮ ಮಾಡಬೇಕೆನಿಸಿತು: ಡ್ರಮ್ಮರ್ ಮಂಜುನಾಥ್ ಸತ್ಯಶೀಲ್ ಮಾತನಾಡಿ, ರಾಜು ಅನಂತಸ್ವಾಮಿ ಅವರ ಅಭಿಮಾನಿಯಾಗಿ ಹಾಗೂ ವಿದ್ಯಾರ್ಥಿಯಾಗಿ ಅವರ ಬಗ್ಗೆ ಒಂದು ಕಾರ್ಯಕ್ರಮ ಮಾಡಬೇಕೆನಿಸಿತು. ಈ ಬಗ್ಗೆ ನಾನು ಹಾಗೂ ಅನನ್ಯ ಭಟ್ ನಿರ್ಧರಿಸಿದ್ದೆವು. ಸುಗಮ ಸಂಗೀತ ಕಾರ್ಯಕ್ರಮ ಎಂದರೆ ಸೀಮಿತ ವಾದ್ಯಗಾರರಷ್ಟೇ ಇರುತ್ತಾರೆ. ಆದರೆ 'ರಾಜು ದಿ ಲೆಜೆಂಡ್' ಕಾರ್ಯಕ್ರಮದಲ್ಲಿ ನಾಡಿನ ಸುಪ್ರಸಿದ್ಧ ಗಾಯಕ, ಗಾಯಕಿಯರು, ಸಹ ಹಾಡುಗಾರರು (ಕೋರಸ್) ಹಾಗೂ ವಾದ್ಯಗಾರರು ಇರಲಿದ್ಧಾರೆ. ಅಲ್ಲದೇ, ಬೇರೆ ದೇಶದ ವಿವಿಧ ವಾದ್ಯಗಳನ್ನು ಇದೇ ಮೊದಲ ಬಾರಿಗೆ ಸುಗಮ ಸಂಗೀತದ ಹಾಡುಗಳಿಗೆ ಬಳಸುವ ವಿಶಿಷ್ಟ ಪ್ರಯತ್ನ ಕೂಡ ಮಾಡಲಾಗುತ್ತಿದೆ. ಈ ಸಮಾರಂಭವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕೆಂಬುದು ನಮ್ಮೆಲ್ಲರ ಕನಸು. ಆ ಕನಸಿಗೆ ಕನ್ನಡ ಕಲಾರಸಿಕರು ಆಸರೆಯಾಗುವ ಭರವಸೆಯಿದೆ. ಇಡೀ ಸಮಾರಂಭ ರಾಜು ಅನಂತಸ್ವಾಮಿ ಅವರಿಗೆ ಅರ್ಪಣೆಯಾಗಲಿದೆ ಎಂದರು.
ರಾಜು ಅನಂತಸ್ವಾಮಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ರಾಜು ದಿ ಲೆಜೆಂಡ್ ಸಮಾರಂಭ ಯಶಸ್ವಿಯಾಗಲೆಂದು ಹಾರೈಸಿದರು. ಪ್ರವೀಣ್ ಡಿ.ರಾವ್, ದಿವ್ಯ ರಾಘವನ್, ಪ್ರವೀಣ್ ಹಾಗೂ ಪ್ರದೀಪ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಕನ್ನಡದಲ್ಲಿ ಬರಲಿದೆ ಅಯೋಧ್ಯೆ ರಾಮ ಮಂದಿರ ಕುರಿತ ಬಯೋಪಿಕ್