ಕೋಲಾರ: ಜಿಲ್ಲಾ ಕಾಂಗ್ರೆಸ್ನಲ್ಲಿ ಮತ್ತೆ ಗೊಂದಲ ಮುಂದುವರೆದಿದೆ. ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪ್ರಚಾರ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಪಕ್ಷದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಇಂದು ಅಭ್ಯರ್ಥಿ ಕೆ.ವಿ.ಗೌತಮ್, ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಸುಧಾಕರ್ ಸೇರಿದಂತೆ ಜಿಲ್ಲೆಯ ಶಾಸಕರು ಮೂಡಣ ಬಾಗಿಲಿನ ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದರು. ಅವರು ದೇವಾಲಯದಿಂದ ಹೊರಗೆ ಬರುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು.
ಕಳೆದ ವಿಧಾನಸಭಾ ಚುಣಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುಟ್ಟು ಆಂಜಿನಪ್ಪ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್ನ ಪರಾಜಿತ ಅಭ್ಯರ್ಥಿ ರಾಜುಗೌಡ ಹಾಗೂ ಅವರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಶಿಡ್ಲಘಟ್ಟದ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ರಾಜುಗೌಡರಿಗೆ ನೀಡುವಂತೆ ಅವರ ಬೆಂಬಲಿಗರು ಒತ್ತಾಯ ಮಾಡಿದ್ದಾರೆ. ಕೆ.ಹೆಚ್.ಮುನಿಯಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ರಾಜುಗೌಡ ಅವರಿಗೆ ವಿರುದ್ಧವಾಗಿ ಸಚಿವ ಎಂ.ಸಿ.ಸುಧಾಕರ್, ಪುಟ್ಟು ಆಂಜಿನಪ್ಪ ಅವರನ್ನು ಕರೆತರಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ತಿಳಿದ ರಾಜುಗೌಡ ಬೆಂಬಲಿಗರು ಸಚಿವರ ಎದುರಲ್ಲೇ ಗಲಾಟೆ ಮಾಡಿ, ಅವರನ್ನು ಕಾಂಗ್ರೆಸ್ಗೆ ಕರೆತರುವುದು ಬೇಡ ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಸಚಿವ ಬೈರತಿ ಸುರೇಶ್ ಹಾಗೂ ಸುಧಾಕರ್ ಈ ಬಗ್ಗೆ ಪಕ್ಷದ ಹಿರಿಯರೊಡನೆ ಮಾತನಾಡಿ ತೀರ್ಮಾನಿಸುವುದಾಗಿ ಭರವಸೆ ನೀಡಿದ ನಂತರ ರಾಜುಗೌಡ ಬೆಂಬಲಿಗರು ಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ: ನಾನು ಸಿಎಂ ಆಗಿರಬೇಕೆಂದರೆ ಸುನೀಲ್ ಬೋಸ್ ಗೆಲ್ಲಿಸಿ: ಸಿಎಂ ಸಿದ್ದರಾಮಯ್ಯ - CM Siddaramaiah