ರಾಯಚೂರು: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಜಾತ್ರೆ ಎಂದರೆ ಅದು ಗಬ್ಬೂರು ಮಹೋತ್ಸವ. ಪುರಾಣ ಪ್ರಸಿದ್ಧ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಬೂದಿ ಬಸವೇಶ್ವರ ಮಠದ ಜಾತ್ರೋತ್ಸವ ಪ್ರಯುಕ್ತ ಬುಧವಾರ ಅದ್ಧೂರಿಯಾಗಿ ಮಹಾರಥೋತ್ಸವ ನಡೆಯಿತು. ಈ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹಾಗೂ ಆಂಧ್ರಪ್ರದೇಶದ ಶಾಸಕರು ಸಹ ಈ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಜಾತ್ರೋತ್ಸವ ಇತಿಹಾಸ: ಎಲ್ಲೆಡೆ ಜಾತ್ರೋತ್ಸವಕ್ಕೆ ರಥವನ್ನು ಭಕ್ತರು ಹಗ್ಗದಿಂದಲೇ ಎಳೆಯುತ್ತಾರೆ. ಆದರೆ ಇಲ್ಲಿ ಮಾತ್ರ ಹಗ್ಗವಿಲ್ಲದೆಯೇ ರಥ ಚಲಿಸುತ್ತದೆ. ಇದು ಅಚ್ಚರಿಯಾದರೂ ನಂಬಲೇಬೇಕು. ಭಕ್ತರ ಜೈಕಾರದ ನಡುವೆ ಪೀಠಾಧಿಪತಿಗಳ ಆಜ್ಞೆಯಂತೆ ತಂತಾನೆ ರಥ ಮುಂದಕ್ಕೆ ಬರುತ್ತದೆ ಎನ್ನುವ ಪ್ರತೀತಿ ಇದೆ. ಭಕ್ತಿಯಿಂದ ಬೇಡಿಕೊಂಡು ಹರಕೆ ತೀರಿಸಿದರೆ ಸಾಕು ದೇವರು ಆಶೀರ್ದಿಸುತ್ತಾನೆ ಎಂಬದು ಇಲ್ಲಿನ ಭಕ್ತರ ನಂಬಿಕೆ. ರಥಕ್ಕೆ ಕಾಯಿ, ಉತ್ತುತ್ತಿ ಅರ್ಪಿಸಿದರೆ ಗಬ್ಬೂರಿನ ಪುರ ದೈವ ಶ್ರೀ ಬೂದಿ ಬಸವೇಶ್ವರ ಒಲಿಯುತ್ತಾನೆ ಎನ್ನುವುದು ಇಲ್ಲಿನ ಭಕ್ತರ ಅಪಾರ ವಿಶ್ವಾಸವಾಗಿದೆ.
ನಿಜಾಮರ ಆಳ್ವಿಕೆ ಸಂದರ್ಭದಲ್ಲಿ ಅಂದಿನ ಪೀಠಾಧಿಪತಿ ಬೂದಿ ಬಸವೇಶ್ವರರು ಮಿಣಿ ಇಲ್ಲದೆ ರಥ ಎಳೆದಿದ್ದಕ್ಕೆ, ಅಂದು ಅಳ್ವಿಕೆ ನಡೆಸುತ್ತಿದ್ದ ನಿಜಾಮ ನೂರು ಎಕರೆ ಭೂಮಿಯನ್ನು ಈ ಮಠಕ್ಕೆ ದೇಣಿಗೆಯಾಗಿ ನೀಡಿದ್ದರು. ಇಂದಿಗೂ ಈ ಮಠಕ್ಕೆ ನಡೆದುಕೊಳ್ಳುವ ಭಕ್ತರ ಸಂಖ್ಯೆ ಅಪಾರ. ಇಲ್ಲಿನ ಪ್ರತೀತಿಯಂತೆ ನಡೆಯುವ ಪವಾಡಸದೃಶ ಜಾತ್ರೆಯಲ್ಲಿ ಭಾವೈಕ್ಯತೆ ಕೇಂದ್ರ ಬಿಂದುವಾಗಿದೆ. ಎಲ್ಲಾ ಸಮುದಾಯದ ಜನರೂ ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.
ರಥೋತ್ಸವದ ದಿನ ಸಂಜೆ ಬೂದಿ ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಊರೊಳಗಿನ ಪುರಾತನ ಮಠಕ್ಕೆ ತೆರಳಿ ಕಾವಿ ಧರಿಸಿ ರಥದ ಕಡೆಗೆ ಆಗಮಿಸಿವರು. ಈ ವೇಳೆ ದಾರಿ ಉದ್ದಕ್ಕೂ ಭಕ್ತರು ಹರಕೆ ಪೂಜೆ ಸಲ್ಲಿಸುತ್ತಾರೆ. ಸಂಜೆಯಾಗುತ್ತಿದ್ದಂತೆ ರಥಕ್ಕೆ ಪೂಜೆ ಸಲ್ಲಿಸಿದ ಸ್ವಾಮೀಜಿ, ತಳಿರು ತೋರಣಗಳಿಂದ ಶೃಂಗಾರಗೊಂಡಿದ್ದ ರಥಕ್ಕೆ ಕೈ ಮಾಡುತ್ತಾರೆ. ಈ ವೇಳೆ ರಥ ಮುಂದೆ ಸಾಗಿದ್ದು, ನಂತರ ಭಕ್ತರು ಅದನ್ನು ಎಳೆದು ಸಂಭ್ರಮಿಸುತ್ತಾರೆ. ಇದು ಈ ಹಿಂದಿನ ಪೀಠಾಧಿಪತಿಗಳ ಕತೃತ್ವ ಶಕ್ತಿ ಎನ್ನುತ್ತಾರೆ ಈಗಿನ ಪೀಠಾಧಿಪತಿ ಬೂದಿ ಬಸವ ಶಿವಾಚಾರ್ಯ ಸ್ವಾಮೀಜಿ.
ಇದನ್ನೂ ಓದಿ: ಚಿಕ್ಕಲ್ಲೂರು ಜಾತ್ರೆ ಆರಂಭ: ಉತ್ತರಕ್ಕೆ ವಾಲಿದ ಚಂದ್ರಮಂಡಲ