ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಅಧ್ಯಕ್ಷ, ರಾಯಚೂರು ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರು ರಾಜ್ಯ ವಿಧಾನಮಂಡಲ ಅಧಿವೇಶನಕ್ಕೆ ಹಾಜರಾಗಿದ್ದು, ''ನಾನು ನಾಪತ್ತೆ ಆಗಿರಲಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಬಸನಗೌಡ ದದ್ದಲ್, ಕಳೆದ ಕೆಲ ದಿನಗಳಿಂದ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ವಿಧಾನಸಭೆ ಅಧಿವೇಶನಕ್ಕೆ ತೆರಳುತ್ತಿರುವಾಗ ಈ ಸಂಬಂಧ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ''ನಾನು ಎಲ್ಲೂ ಹೋಗಿಲ್ಲ. ಎರಡು ದಿನ ಊರಲ್ಲಿ ಇದ್ದೆ'' ಎಂದು ಸ್ಪಷ್ಟನೆ ನೀಡಿದ್ದಾರೆ.
''ನಾನು ಊರಿನಲ್ಲೇ ಇದ್ದೆ, ಎಲ್ಲಿಗೂ ಹೋಗಿಲ್ಲ. ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಈಗ ವಿಧಾನಸಭೆ ಅಧಿವೇಶನಕ್ಕೆ ಹೋಗುತ್ತಿದ್ದೇನೆ. ನಾನು ನಾಪತ್ತೆಯಾಗಿರಲಿಲ್ಲ. ಎರಡು ದಿನ ಊರಿಗೆ ಹೋಗಿದ್ದೆ'' ಎಂದು ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಈಗಾಗಲೇ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಂಧನ ಮಾಡಿದ್ದಾರೆ. ಇದರ ಬೆನ್ನಲ್ಲೇ ನಿಗಮದ ಅಧ್ಯಕ್ಷರಾಗಿರುವ ಬಸನಗೌಡ ದದ್ದಲ್ ಅವರಿಗೂ ಇ.ಡಿ. ವಿಚಾರಣೆ ನಡೆಸಬಹುದು ಎಂಬ ಮಾತುಗಳು ಕೇಳಿ ಬಂದಿತ್ತು.
ಇತ್ತ, ಬಸನಗೌಡ ದದ್ದಲ್ ಕೆಲ ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸುದ್ದಿಯಾಗಿತ್ತು. ಆದರೆ, ಇಂದು ದದ್ದಲ್ ಅವರು ಅಧಿವೇಶನಕ್ಕೆ ಹಾಜರಾಗಿ, ಅದೆಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ: ವಿಧಾನಸೌಧಕ್ಕೆ ಬಿಜೆಪಿ ನಾಯಕರ ಪಾದಯಾತ್ರೆ - BJP Leaders Protest