ರಾಯಚೂರು: ವಿಷಾಹಾರ ಸೇವನೆಯಿಂದ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ರಾಯಚೂರು ನಗರದ ಹೊರವಲಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೆಲ್‌ನಲ್ಲಿ ನಡೆದಿದೆ.
20 ವಿದ್ಯಾರ್ಥಿನಿಯರಲ್ಲಿ ಐವರು ವಿದ್ಯಾರ್ಥಿನಿಯರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಸಂಜೆ ವೇಳೆ ಸೇವಿಸಿದ ಪಾನಿಪೂರಿ, ರಾತ್ರಿ ಊಟ, ಎಗ್ ಕರಿ, ಅನ್ನ ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದಾರೆ. ಹಾಸ್ಟೆಲ್ನ ಒಟ್ಟು 95 ವಿದ್ಯಾರ್ಥಿನಿಯರಲ್ಲಿ 20ಕ್ಕೂ ಹೆಚ್ಚು ಜನರಿಗೆ ವಾಂತಿ ಬೇದಿಯಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿರುವ ವಿದ್ಯಾರ್ಥಿನಿಯರು ಅಗ್ರಿಕಲ್ಚರ್ ಎಂಎಸ್ಸಿ, ಪಿಹೆಚ್‌ಡಿ ವಿದ್ಯಾರ್ಥಿನಿಯರಾಗಿದ್ದಾರೆ.
ಈ ಕುರಿತು ವಿಶ್ವವಿದ್ಯಾಲಯ ಕುಲಪತಿ ಡಾ.ಹನುಮಂತಪ್ಪ ಮಾತನಾಡಿ, "ನಿನ್ನೆ ಸಂಜೆ ವೇಳೆ ಸ್ನಾಕ್ಸ್ ಬೇಕೆಂದು ವಿದ್ಯಾರ್ಥಿನಿಯರು ಹೇಳಿಸಿಕೊಂಡು ಪಾನಿಪೂರಿ ಹಾಗೂ ಎಗ್ ಬುರ್ಜಿ ಅಥವಾ ಎಗ್ ಕರಿ ಮಾಡಿಸಿಕೊಂಡಿದ್ದರು. ಕೆಲವರಿಗೆ ಮೊಟ್ಟೆ ಅಥವಾ ಪಾನಿಪೂರಿ ಆಗಿಬಾರದೆ ಆರೋಗ್ಯದಲ್ಲಿ ತೊಂದರೆಯಾಗಿದೆ. ಈ ವಿಷಯ ತಿಳಿದ ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಯಾರಿಗೂ ಏನು ತೊಂದರೆಯಾಗಿಲ್ಲ, ಚೇತರಿಸಿಕೊಳ್ಳುತ್ತಿದ್ದಾರೆ. ಪಾಲಕರು ಆತಂಕಪಡಬೇಕಾಗಿಲ್ಲ. ನಮ್ಮಲ್ಲಿ ವೈದ್ಯರಿದ್ದು, ಸಿಬ್ಬಂದಿ ವಿದ್ಯಾರ್ಥಿನಿಯರನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಫುಡ್ ಫಾಯಿಸನ್‌ನಿಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಅಸ್ವಸ್ಥ