ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ 1000 ಕೋಟಿ ಆರೋಪದ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಅವರು ಡಿಕೆಶಿ ಅವರನ್ನು ಉದ್ದೇಶಿಸಿ ಹೇಳಿದ್ದಾರಾ ಗೊತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಯತ್ನಾಳ್ ಆರೋಪದ ಬಗ್ಗೆ ತನಿಖೆ ಮಾಡುವುದಾದರೆ ಮಾಡಲಿ. ಯತ್ನಾಳ್ ಡಿಕೆಶಿ ಬಗ್ಗೆನೇ ಮಾತನಾಡುತ್ತಾರೆ. ಡಿಕೆಶಿ ಉದ್ದೇಶಿಸಿ ಆ ರೀತಿ ಹೇಳಿರಬಹುದು. ನಮ್ಮ ಪಕ್ಷದಲ್ಲಿ ಆ ತರಹ ಯಾವುದೇ ಪದ್ಧತಿ ಇಲ್ಲ ಎಂದು ಇದೇ ವೇಳೆ ತಿಳಿಸಿದರು.
ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ : ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ವಿರುದ್ಧ ಪೊಲೀಸ್ ಅಧಿಕಾರಿ ಮಾತನಾಡಿರುವುದು ಇತಿಹಾಸದಲ್ಲೇ ಮೊದಲು. ಕಾನೂನಿನಲ್ಲಿ ಅದಕ್ಕೆ ಅವಕಾಶ ಇಲ್ಲ. ಈ ರೀತಿ ಮಾತನಾಡಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಆ ಪತ್ರ ಎಲ್ಲಿ ಡ್ರಾಫ್ಟ್ ಆಯ್ತು?. ಆ ಅಧಿಕಾರಿಗೆ ಕಾಮನ್ ಸೆನ್ಸ್ ಬೇಕಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾನೂನಿನಿಂದ ಬಚಾವಾಗಲು ಸಿಬ್ಬಂದಿಗೆ ಆ ರೀತಿ ಪತ್ರ ಬರೆದಿದ್ದಾರೆ. ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡಿದ್ದಾರೆ. ಈಗ ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅಧಿಕಾರಿ ಲಿಮಿಟ್ ಬಿಟ್ಟು ಹೋಗಿರುವುದು ಅಕ್ಷಮ್ಯ ಅಪರಾಧ. ಅವರ ವಿರುದ್ದ ಸಿಎಸ್ ಕ್ರಮ ಕೈಗೊಳ್ಳಬೇಕು. ಈ ರೀತಿ ನಾಳೆ ಸಿಎಂ, ಸಚಿವರ ಮೇಲೂ ಮಾತನಾಡುತ್ತಾರೆ. ಈ ಪರಂಪರೆ ಸರಿಯಲ್ಲ. ಅಧಿಕಾರದ ದುರುಪಯೋಗ ಆಗಿದೆ ಎಂದು ಕಿಡಿಕಾರಿದರು.
ಚುನಾವಣಾ ಬಾಂಡ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅದು ಏನಿಲ್ಲ. ಅದರಲ್ಲಿ ಏನಿಲ್ಲ. ಸುಪ್ರೀಂ ಕೋರ್ಟ್ ವಿಚಾರಣೆಯಲ್ಲೇ ಆ ವಿಚಾರ ಇತ್ಯರ್ಥವಾಗಿದೆ. ಕಾಂಗ್ರೆಸ್ನವರೂ 1000 ಕೋಟಿಗೂ ಅಧಿಕ ಚುನಾವಣಾ ಬಾಂಡ್ ಪಡೆದಿದ್ದಾರೆ. ಹಾಗಾದರೆ ಕಾಂಗ್ರೆಸ್ನವರು ಯಾರಿಗೆ ಬೆದರಿಕೆ ಹಾಕಿದ್ದಾರೆ?. ತೃಣಮೂಲ ಕಾಂಗ್ರೆಸ್ ಬಾಂಡ್ ಮೂಲಕ ಅತಿ ಹೆಚ್ಚು ಹಣ ಸಂಗ್ರಹಿಸಿದೆ. ವಿಪಕ್ಷಗಳೇ ಹೆಚ್ಚು ಬಾಂಡ್ ಮೂಲಕ ಹಣ ಸಂಗ್ರಹ ಮಾಡಿದೆ. ಇವರ ಮೇಲೆ ಏಕೆ ಕೇಸ್ ಹಾಕಿಲ್ಲ?. ಬರೀ ಸುದ್ದಿ ಮಾಡುವುದು ಬಿಟ್ಟರೆ ಇದರಲ್ಲಿ ಏನೂ ತಪ್ಪು ಕಂಡು ಬರುತ್ತಿಲ್ಲ. ಮುಡಾಗೆ ಕೌಂಟರ್ ಕೊಡಲು ಇದನ್ನು ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಕುಟುಂಬಕ್ಕೆ ಹಣ ಪಡೆದಿದ್ದಾರಾ?. ದೇಶದಲ್ಲಿನ ಎಲ್ಲ ಪಕ್ಷಗಳು ಚುನಾವಣಾ ಬಾಂಡ್ ಪಡೆದಿದ್ದಾರೆ. ಇದು ಕಾಂಗ್ರೆಸ್ ಪ್ರಾಯೋಜಿತವಾಗಿದೆ. ಇದು ಬಹಳ ದಿನ ನಡೆಯಲ್ಲ. ಹೈಕಮಾಂಡ್ ನಿರ್ದೇಶನದ ಮೇಲೆ ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನಿಮ್ಮ ಸಿಎಂ ಆಸೆ ತೀರಿಸಬಹುದು : ಮಲ್ಲಿಕಾರ್ಜುನ ಖರ್ಗೆ ಮೋದಿ ಇಳಿಸುವ ತನಕ ನಾನು ಹೋಗಲ್ಲ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ನೀವು ನೂರು ವರ್ಷ ಬಾಳಬೇಕು ಎಂಬುದು ನಮ್ಮ ಬಯಕೆ. ಆದರೆ ನೂರು ವರ್ಷ ತನಕ ಮೋದಿಯವರೇ ಇರುತ್ತಾರೆ. ಅವರ ಮೇಲೆ ಸವಾಲು ಹಾಕಲು ಹೋಗಿ ನಿಮ್ಮ ವ್ರತ ಏಕೆ ಹಾಳು ಮಾಡುತ್ತಿದ್ದೀರಿ. ಜನರನ್ನು ಮರಳು ಮಾಡಬೇಡಿ. ನೀವು ನಿಮ್ಮ ರಾಜ್ಯದ ಸಿಎಂ ಆಗುವ ಆಸೆಯನ್ನು ತೀರಿಸಬಹುದು. ಮೋದಿ ಇಳಿಸಲು ನಿಮ್ಮ ಕನಸಲ್ಲೂ ಸಾಧ್ಯವಿಲ್ಲ. ಮುಳುಗುವ ಹಡಗು ಕಾಂಗ್ರೆಸ್. ಮೋದಿ ಇಳಿಸುವ ಮಾತು ಕೇವಲ ಹಗಲು ಕನಸಾಗಿದೆ. ಹೋದ ಬಾರಿ ವಿಪಕ್ಷ ನಾಯಕನಾಗುವ ಮಾನ್ಯತೆನೂ ಇಲ್ಲ. ಮೋದಿ ಬಗ್ಗೆ ಟೀಕೆ ಮಾಡುವಾಗ ಯೋಚನೆ ಮಾಡಿ ಎಂದರು.
ರಾಜೀನಾಮೆ ನೀಡುವವರೆಗೆ ಹೋರಾಟ ನಿಲ್ಲಲ್ಲ: ಮುಡಾ ಸಂಬಂಧ ಮುಂದಿನ ಹೋರಾಟ ವಿಚಾರವಾಗಿ ಮಾತನಾಡಿದ ಅವರು, ಮುಡಾ ಸಂಬಂಧ ನಮ್ಮ ಹೋರಾಟದ ಫಲವಾಗಿ ಈಗ ಅಂತಿಮ ಘಟ್ಟಕ್ಕೆ ಬಂದಿದೆ. ಪ್ರಕರಣವನ್ನು ಸಿಬಿಐಗೆ ತನಿಖೆಗೆ ಕೊಡಬೇಕು. ಅವರು ರಾಜೀನಾಮೆ ಕೊಡುವ ತನಕ ಹೋರಾಟ ಮುಂದುವರಿಸುತ್ತೇವೆ. ಮುಂದಿನ ಹೋರಾಟ ಹೇಗಿರಬೇಕು ಎಂದು ಚರ್ಚೆ ಮಾಡಿ ಮುಂದುವರೆಯುತ್ತೇವೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಕಾನೂನು ಕುಣಿಕೆಯಲ್ಲಿ ಸಿಲುಕಿದರೆ ಏನೂ ಮಾಡುವುದಕ್ಕೆ ಆಗುವುದಿಲ್ಲ. ಬಿ. ನಾಗೇಂದ್ರ ಏಕೆ ರಾಜೀನಾಮೆ ಕೊಟ್ಟರು?. ಸಿಬಿಐ ತನಿಖೆ ಆಗುವವರೆಗೆ ನಮ್ಮ ಹೋರಾಟ ನಿಲ್ಲಲ್ಲ ಎಂದು ಹೇಳಿದರು.
ಇದನ್ನೂ ಓದಿ : ಮೋದಿ ಭಯದಿಂದ 'ಒಂದು ದೇಶ, ಒಂದು ಚುನಾವಣೆ'ಗೆ ಕಾಂಗ್ರೆಸ್ ವಿರೋಧ: ಆರ್.ಅಶೋಕ್ - One Nation One Election