ಬೆಂಗಳೂರು: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸಮ್ಮುಖದಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪುಟ್ಟಣ್ಣ ಅವರು ಶಾಂತಿನಗರದ ಪ್ರಾದೇಶಿಕ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಫೆಬ್ರವರಿ 16 ರಂದು ಚುನಾವಣೆ ನಡೆಯಲಿದೆ. ನಿನ್ನೆಯೇ ನಾಮಪತ್ರ ಸಲ್ಲಿಕೆ ಮಾಡಿದ್ದ ಪುಟ್ಟಣ್ಣ, ಇಂದು ಸಿಎಂ, ಡಿಸಿಎಂ ಜೊತೆಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಜೆಡಿಎಸ್ ಸೋಲುತ್ತೇವೆ ಎಂಬ ಭಯದಿಂದಲೇ ಮೈತ್ರಿ ಮಾಡಿಕೊಂಡಿದ್ದಾರೆ. ಮೈತ್ರಿ ಮಾಡಿಕೊಂಡಿದ್ದರೂ ಕೂಡ ಪುಟ್ಟಣ್ಣ ಅವರು ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಪುಟ್ಟಣ್ಣ ವಿಧಾನಸಭಾ ಚುನಾವಣೆಗೆ ನಿಲ್ಲಲು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಜೀನಾಮೆ ಕೊಟ್ಟಿದ್ದ ಕ್ಷೇತ್ರವಿದು. ಉಪಚುನಾವಣೆಗೆ ಐದನೇ ಬಾರಿ ಸ್ಪರ್ಧೆ ಮಾಡುತ್ತಿದ್ದಾರೆ. ಹಿಂದೆಯೂ ಬಿಜೆಪಿ, ಜೆಡಿಎಸ್ ಸ್ಪರ್ಧೆ ಮಾಡಿದ್ದರೂ ಬಿಜೆಪಿ, ಜೆಡಿಎಸ್ನವರನ್ನು ಸೋಲಿಸಿ ಪುಟ್ಟಣ್ಣ ಗೆದ್ದಿದ್ದರು. ಸತತವಾಗಿ ನಾಲ್ಕು ಬಾರಿ ಶಿಕ್ಷಕರ ಕ್ಷೇತ್ರದಿಂದ ಗೆಲ್ಲಬೇಕೆಂದರೆ ಶಿಕ್ಷಕರ ಬೆಂಬಲವನ್ನು ಪಡೆದಿದ್ದು, ಅವರ ಮನಸ್ಸನ್ನು ಗೆದ್ದಿದ್ದಾರೆ. ಹಾಗಾಗಿ ಅವರನ್ನು ಶಿಕ್ಷಕರು ಒಪ್ಪಿದ್ದಾರೆ ಎಂದರು.
ಪ್ರಚೋದನೆ ನೀಡಿ ಶಾಂತಿ ಕದಡಿದ್ದಾರೆ: ಮಂಡ್ಯ ಘಟನೆಯ ವಿಚಾರವಾಗಿ ಹೆಚ್.ಡಿ. ಕುಮಾರಸ್ವಾಮಿಯವರು ಸುದ್ದಿಗೋಷ್ಠಿ ನಡೆಸಿ ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಕುಮಾರಸ್ವಾಮಿಯವರೇ ಪ್ರಚೋದನೆ ಮಾಡಿ ಗಲಾಟೆ ಮಾಡಿಸಿದ್ದಾರೆ. ಶಾಂತಿ ಕದಡಿದ್ದಾರೆ. ಕುಮಾರಸ್ವಾಮಿ ಹಾಗೂ ಬಿಜೆಪಿಯವರ ತಪ್ಪು ಎನ್ನುವುದು ಸ್ಪಷ್ಟವಾಗಿದೆ. ಪಂಚಾಯಿತಿಯಲ್ಲಿ ಧ್ವಜಸ್ತಂಭದ ಮೇಲೆ ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸಿ ಎಂದು ಅನುಮತಿ ನೀಡಲಾಗಿದೆ. ಈ ಬಗ್ಗೆ ಮುಚ್ಚಳಿಕೆಯನ್ನು ಅವರು ಬರೆದುಕೊಟ್ಟಿದ್ದಾರೆ. ಅದರೊಂದಿಗೆ ಯಾವುದೇ ಪಕ್ಷದ, ಧರ್ಮದ ಧ್ವಜವನ್ನು ಹಾರಿಸಬಾರದು ಎಂದೂ ಕೂಡು ತಿಳಿಸಲಾಗಿದೆ. ಆದರೆ ಇವರು ಭಗವಾಧ್ವಜ ಹಾರಿಸಿದ್ದಾರೆ. ಅದರಿಂದ ಅಶಾಂತಿ ನಿರ್ಮಾಣವಾಗುವಂತೆ ಮಾಡಿದ್ದಾರೆ. ಇದರ ಪರವಾಗಿ ಬಂದಿರುವವರು ಹೆಚ್.ಡಿ. ಕುಮಾರಸ್ವಾಮಿ, ಸಿ.ಟಿ. ರವಿ. ತಪ್ಪು ಯಾರದ್ದು ಹಾಗಾದರೆ ಎಂದು ಪ್ರಶ್ನಿಸಿದರು.
ಶಿಕ್ಷಕರ ಬದುಕಿನ ಬಗ್ಗೆ ಕಾಳಜಿ ವಹಿಸಲಿದೆ: ಇದೇ ವೇಳೆ ಮಾತನಾಡಿದ ಡಿಸಿಎಂ, ಶಿಕ್ಷಕರ ಬದುಕಿನ ಬಗ್ಗೆ ನಮ್ಮ ಸರ್ಕಾರ ಕಾಳಜಿ ವಹಿಸಲಿದೆ. ಚುನಾವಣೆಗೂ ಮುನ್ನ ನಾವು ಶಿಕ್ಷಕರಿಗೆ ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತೇವೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಬಗ್ಗೆ ಈಗ ಮಾತನಾಡುವುದಿಲ್ಲ. ಒಪಿಎಸ್ ಸೇರಿದಂತೆ ಅನೇಕ ವಿಚಾರವಾಗಿ ನಾವು ಈಗಾಗಲೇ ನುಡಿದಂತೆ ನಡೆದಿದ್ದೇವೆ. ಶಿಕ್ಷಕ ವೃಂದದವರು ವಿದ್ಯಾವಂತರು, ಪ್ರಜ್ಞಾವಂತರಿದ್ದಾರೆ. ನಮ್ಮ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಈ ಚುನಾವಣೆ ಎದುರಿಸುತ್ತೇವೆ. ನಮ್ಮ ಅಭ್ಯರ್ಥಿ ಅನುಭವಿ. ತಮ್ಮ ಸ್ಥಾನವನ್ನು ತ್ಯಾಗ ಮಾಡಿ, ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಅವರಿಗೆ ನಾವು ಬೆಂಬಲ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ನಾನು ಬೆಂಕಿ ಹಚ್ಚಲು ಮಂಡ್ಯಕ್ಕೆ ಹೋಗಿರಲಿಲ್ಲ, ಬೆಂಕಿ ಹಚ್ಚಿದ್ದೇ ನೀವು: ಹೆಚ್ಡಿಕೆ ವಾಗ್ದಾಳಿ