ಬೆಂಗಳೂರು : ಸ್ನೇಹಿತರಿಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪ ಪಬ್ ಬೌನ್ಸರ್‌ಗಳ ವಿರುದ್ಧ ಕೇಳಿ ಬಂದಿದೆ. ಅಶೋಕ್ ನಗರದ ಮೆಗ್ರಾತ್ ರಸ್ತೆಯಲ್ಲಿರುವ ಖಾಸಗಿ ಕಂಪನಿ ಪಬ್ ಬೌನ್ಸರ್‌ಗಳ ವಿರುದ್ಧ ಆರೋಪ ಕೇಳಿ ಬಂದಿದ್ದು, ಹಲ್ಲೆಗೊಳಗಾದ ಯುವಕರ ಸ್ನೇಹಿತರು ಎಕ್ಸ್ ಆ್ಯಪ್‌ನಲ್ಲಿ ದೂರಿದ್ದಾರೆ.
ಬೆಂಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಸ್ನೇಹಿತರಿಬ್ಬರು, ತಡರಾತ್ರಿ ಅಶೋಕ್ ನಗರ ಠಾಣಾ ವ್ಯಾಪ್ತಿಯಲ್ಲಿರುವ ಕಂಪನಿ ಪಬ್‌ಗೆ ತೆರಳಿದ್ದರು. ಮದ್ಯಪಾನ ಮಾಡಿದ್ದ ಸ್ನೇಹಿತರಿಬ್ಬರ ಜೊತೆ ಪಬ್ ಬೌನ್ಸರ್‌ಗಳು ಗಲಾಟೆ ಮಾಡಿದ್ದಾರೆ. ಸುಮಾರು 6-8 ಜನ ಬೌನ್ಸರ್‌ಗಳು ಕಬ್ಬಿಣದ ರಾಡ್ ಹಾಗೂ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಗಲಾಟೆ ಸಂದರ್ಭದಲ್ಲಿ ಸ್ಥಳಕ್ಕೆ ಹೋಗಿದ್ದ ಆಶೋಕ್ ನಗರ ಠಾಣಾ ಪೊಲೀಸರು ಗಲಾಟೆ ತಿಳಿಗೊಳಿಸಿದ್ದಾರೆ.
ಹಲ್ಲೆಗೊಳಗಾದ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗಾಯಾಳುಗಳ ಸ್ನೇಹಿತರೊಬ್ಬರು ಘಟನೆಯ ವಿಡಿಯೋವನ್ನ ಎಕ್ಸ್ ಆ್ಯಪ್ ಮೂಲಕ ಹಂಚಿಕೊಂಡಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹಲ್ಲೆಗೊಳಗಾದವರಿಂದ ದೂರು ಪಡೆದು ಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಏರಿಯಾದಲ್ಲಿ ಪ್ರಾಬಲ್ಯ ಸಾಧಿಸಲು ಕಂಡ ಕಂಡವರ ಮೇಲೆ ಹಲ್ಲೆ ಮಾಡುತ್ತಿದ್ದವನ ಕೊಲೆ: ನಾಲ್ವರು ಆರೋಪಿಗಳು ಅಂದರ್ - MURDER CASE