ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್ಐ) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪ ಬಲವಾಗಿ ಕೇಳಿ ಬಂದಿದೆ. ಈ ಬಾರಿಯೂ ಪೊಲೀಸ್ ಸಿಬ್ಬಂದಿಯೊಬ್ಬರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ನೂರಾರು ಪರೀಕ್ಷಾ ಅಭ್ಯರ್ಥಿಗಳು ಚಂದ್ರಾಲೇಔಟ್ ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡು ದೂರು ನೀಡಿದ್ದಾರೆ.
ದೂರು ನೀಡಿದ ಮೇರೆಗೆ ಇಂಟೆಲಿಜೆನ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಓರ್ವ ಪಿಎಸ್ಐ ನನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಚುರುಕುಗೊಳಿಸಿದ್ದಾರೆ. ಪಿಎಸ್ಐ ಜೊತೆ ಕರ್ಮಷಿಯಲ್ ಟ್ಯಾಕ್ಸ್ ಇನ್‌ಸ್ಪೆಕ್ಟರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಎರಡು ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿದೆ.
ವಾಟ್ಸ್ಆ್ಯಪ್ ಆಡಿಯೊ ಹಾಗೂ ಸಂದೇಶದಲ್ಲಿ ಸಬ್ ಇನ್‌ಸ್ಪೆಕ್ಟರ್ ಒಬ್ಬರು ಡೀಲ್ ಕುದುರಿಸಿಕೊಂಡಿದ್ದಾರೆ ಎನ್ನಲಾಗಿದ್ದು, ನೂರಾರು ಪರೀಕ್ಷಾ ಅಭ್ಯರ್ಥಿಗಳು ಠಾಣೆ ಮುಂದೆ ಜಮಾಯಿಸಿ ತಮ್ಮ ಆಕ್ರೋಶ ಹೊರಹಾಕಿದರು. ದೂರು ನೀಡುತ್ತಿದ್ದಂತೆ ಆರೋಪಿತ ಪಿಎಸ್ಐನನ್ನ ವಶಕ್ಕೆ ಪಡೆದು ಕೂಲಂಕುಶವಾಗಿ ತನಿಖೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ.. ಮರು ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದ ಕೆಇಎ