ಯಾದಗಿರಿ: ಪಿಎಸ್ಐ ಪರಶುರಾಮ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಸಾವಿನಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಸನ್ನಿರೆಡ್ಡಿ ಪಾಟೀಲ್ ಕೈವಾಡ ಇದೆ ಎಂದು ಮೃತ ಪಿಎಸ್ಐ ಅವರ ಪತ್ನಿ ಶ್ವೇತಾ ನೀಡಿರುವ ದೂರಿನ ಆಧಾರದ ಮೇಲೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ 17 ಗಂಟೆಗಳ ಬಳಿಕ ಎಫ್ಐಆರ್ ದಾಖಲಾಗಿದೆ.
''ಶಾಸಕ ಹಾಗೂ ಪುತ್ರನ ನಿರಂತರ ಒತ್ತಡದಿಂದ ನನ್ನ ಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೆ ವರ್ಗಾವಣೆ ಮಾಡಿರುವುದು ಕೂಡ ನಿಯಮಬಾಹಿರ. ನನಗೆ ಅನ್ಯಾಯವಾಗಿದೆ. ಶಾಸಕ ಹಾಗೂ ಅವರ ಪುತ್ರ 30 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಕೊಡದೆ ಇದ್ದಾಗ ನನಗೆ ವರ್ಗಾವಣೆ ಮಾಡಿದ್ದಾರೆ ಎಂದು ನನ್ನ ಬಳಿ ಹೇಳಿಕೊಂಡಿದ್ದರು'' ಎಂದು ದೂರಿನಲ್ಲಿ ಪತ್ನಿ ಶ್ವೇತಾ ಅಪಾದನೆ ಮಾಡಿದ್ದಾರೆ.
''ಅಲ್ಲದೆ ನನ್ನ ಪತಿಯ ಸಾವಿಗೆ ನೇರವಾಗಿ ಶಾಸಕರು ಹಾಗೂ ಅವರ ಪುತ್ರ ನೇರ ಕಾರಣ'' ಎಂದೂ ದೂರಿದ್ದಾರೆ.
ಈ ಘಟನೆ ಖಂಡಿಸಿ ವಿವಿಧ ಸಂಘಟನೆಗಳು ರಸ್ತೆ ತಡೆದು ಪ್ರತಿಭಟಿಸಿದ ಹಿನ್ನೆಲೆ ಎಫ್ಐಆರ್ ದಾಖಲಾಗಿದೆ.
''ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕಾಂಗ್ರೆಸ್ ಶಾಸಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಹಣದಾಹಕ್ಕೆ ದಕ್ಷ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ. ವರ್ಗಾವಣೆಗೆ ಶಾಸಕರು ಬೇಡಿಕೆ ಇಟ್ಟಿರುವುದು ತಿಳಿದು ಬಂದಿದ್ದು, ಅವರ ವಿರುದ್ಧ ಕೇವಲ ಎಫ್ಐಆರ್ ದಾಖಲಿಸಿದರಷ್ಟೇ ಸಾಲದು. ಕೂಡಲೇ ಬಂಧಿಸಿ ತಕ್ಕ ಶಿಕ್ಷೆ ವಿಧಿಸಬೇಕೆಂದು'' ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: PSI ಪರಶುರಾಮ್ ಸಾವು ಪ್ರಕರಣ: ತನಿಖೆಗೆ ಆದೇಶ - ಗೃಹ ಸಚಿವ ಡಾ.ಜಿ.ಪರಮೇಶ್ವರ್ - PSI Death Case