ಬೆಳಗಾವಿ: ವಿವಿಧ ಇಲಾಖೆಗಳ ತಾಂತ್ರಿಕ ಸಿಬ್ಬಂದಿಯ ಮಾದರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೂ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಬೆಳಗಾವಿ ತಹಶೀಲ್ದಾರ್ ಕಚೇರಿ ಮುಂದೆ ಗುರುವಾರ ಧರಣಿ ನಡೆಸಿದ್ದಾರೆ. ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಶಾಂತಿಯುತವಾಗಿ ಪ್ರತಿಭಟಿಸಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ತಾಲೂಕು ಘಟಕದ ಅಧ್ಯಕ್ಷ ಎಸ್.ಪಿ.ಶಿಂಧೆ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿ, "ನಾವು ತಾಂತ್ರಿಕವಾಗಿ ಅನುಭವ ಹೊಂದಿರುವ ಸಿಬ್ಬಂದಿಯಲ್ಲ. ಆದರೂ, ಸರ್ಕಾರ ವಹಿಸಿದ ತಾಂತ್ರಿಕ ಕೆಲಸಗಳನ್ನು ಮಾಡುತ್ತಿದ್ದೇವೆ. ನಾವು ಮೂಲಸೌಕರ್ಯ ವಿಚಾರವಾಗಿ ಕಡೆಗಣನೆಗೆ ಒಳಗಾಗಿದ್ದೇವೆ. ಹಾಗಾಗಿ, ಕೆಲಸಕ್ಕೆ ಸಾಮೂಹಿಕವಾಗಿ ರಜೆ ಹಾಕಿ ಧರಣಿ ಮಾಡುತ್ತಿದ್ದೇವೆ. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ ಕಲ್ಪಿಸಬೇಕು. ಗುಣಮಟ್ಟದ ಪೀಠೋಪಕರಣಗಳು, ಅಂತರ್ಜಾಲ ವ್ಯವಸ್ಥೆಯನ್ನು ಒದಗಿಸಬೇಕು. ಸಂಯೋಜನೆ, ಇ-ಆಫೀಸ್, ಗರುಡ, ಭೂಮಿ, ನವೋದಯ, ದಿಶಾಂಕ ಮತ್ತಿತರ ತಂತ್ರಾಂಶಗಳ ನಿರ್ವಹಣೆಗೆ ಹೆಚ್ಚಿನ ಡೇಟಾ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳನ್ನು ನೀಡಬೇಕು" ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನಾನಿರತ ಸಿಬ್ಬಂದಿ ದಿವ್ಯಾ ಕಲಾದಗಿ ಮಾತನಾಡಿ, "15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ನಮಗೆ ಬಡ್ತಿ ಸಿಕ್ಕಿಲ್ಲ. ಬೇರೆ ಇಲಾಖೆಗಳ ಸಿಬ್ಬಂದಿಗೆ ಹೋಲಿಸಿದರೆ ನಮಗೆ ನಿರೀಕ್ಷೆಯಂತೆ ವೇತನವೂ ಇಲ್ಲ. ಹಾಗಾಗಿ ಸೇವಾಜ್ಯೇಷ್ಠತೆ ಆಧರಿಸಿ, ಅರ್ಹರಿಗೆ ತ್ವರಿತವಾಗಿ ಸೇವಾಬಡ್ತಿ ನೀಡಬೇಕು. ಇನ್ನು ಕೆಲಸದ ಒತ್ತಡದಲ್ಲಿ ಮನೆಯವರಿಗೆ ಸಮಯ ಕೊಡಲು ಆಗುತ್ತಿಲ್ಲ. ರಜಾ ದಿನಗಳಲ್ಲಿ ನಮ್ಮನ್ನು ಫ್ರೀ ಬಿಡಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದೆ ಉಗ್ರ ಹೋರಾಟ, ಉಪವಾಸ ಸತ್ಯಾಗ್ರಹವನ್ನೂ ಮಾಡುತ್ತೇವೆ. ಕುಟುಂಬಸಮೇತ ಧರಣಿ ಕೂರುತ್ತೇವೆ" ಎಂದು ಎಚ್ಚರಿಸಿದರು.
ಚಿಕ್ಕೋಡಿಯಲ್ಲೂ ಪ್ರತಿಭಟನೆ: ಚಿಕ್ಕೋಡಿಯಲ್ಲಿಯೂ ಕೂಡ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪುಬಟ್ಟೆ ಕಟ್ಟಿಕೊಂಡು ರಾಜ್ಯ ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಅಥಣಿ ತಹಶೀಲ್ದಾರ್ ಕಚೇರಿಯೆದುರು ಪ್ರತಿಭಟನೆ ನಡೆಸಿದರು. ಅಥಣಿ ತಹಶೀಲ್ದಾರ್ ಶಿದರಾಯ್ ಭೋಸಗೆ ಅವರ ಮುಖಾಂತರ ಕಂದಾಯದ ಸಚಿವ ಕೃಷ್ಣಬೈರೇಗೌಡರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಪಾಟೀಲ್ ಹಾಗೂ ಕಲ್ಲಮೇಶ ಕಲಮಡಿ ಮಾತನಾಡಿ, "ಹಲವಾರು ವರ್ಷಗಳಿಂದ ನಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರಗಳಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಇಂದು ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ತಾಲೂಕು ಕ್ಷೇತ್ರದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಸರ್ಕಾರ ಕೂಡಲೇ ಈಡೇರಿಸಬೇಕು" ಎಂದು ಒತ್ತಾಯಿಸಿದರು.
"ಹಾಗೆಯೇ ಮಾತೃ ಇಲಾಖೆಯ ಎಲ್ಲಾ ಕೆಲಸಗಳೊಂದಿಗೆ ಸರ್ಕಾರದ ಆದೇಶದಂತೆ ಇತರೆ ಇಲಾಖೆಗಳ ಹಲವಾರು ಕೆಲಸಗಳನ್ನು ನಿರ್ವಹಿಸುವ ಹಾಗೂ ಚುನಾವಣೆ, ಅತಿವೃಷ್ಟಿ, ಅನಾವೃಷ್ಟಿ, ಇನ್ನಿತರ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ದಿನನಿತ್ಯ ಸಾರ್ವಜನಿಕ ವಲಯದಲ್ಲಿ ನೂರಾರು ಸೇವೆಗಳನ್ನು ನೀಡುವಾಗ ಮಾರಣಾಂತಿಕ ದೈಹಿಕ ಹಲ್ಲೆ, ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು ಸರ್ಕಾರ ಆದಷ್ಟು ಬೇಗ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು" ಎಂದು ಆಗ್ರಹಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲೆಂದು ನಾನು ಹೇಳಲ್ಲ: ಎಸ್.ಆರ್.ಹಿರೇಮಠ - S R Hiremath