ಬೆಳಗಾವಿ: "ಸಂವಿಧಾನದ ಹೆಸರಿನ ಮೇಲೆ ನಾನು ಪ್ರಮಾಣವಚನ ಸ್ವೀಕರಿಸಿದ್ದೇನೆ. ತಂದೆಯವರು ಅದೇ ಹಾದಿಯಲ್ಲಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇನೆ. ಸಂವಿಧಾನ ಉಳಿಸುವ ನಿಟ್ಟಿನಲ್ಲಿ ನಾನು ಕೂಡ ಪ್ರಯತ್ನಿಸುತ್ತೇನೆ" ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಸಂಸದೆಯಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ಇದೇ ವೇಳೆ, ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರಿಯಾಂಕಾ ಗೌರವ ಸಲ್ಲಿಸಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಬೆಳಗಾವಿಗೆ ಬರುತ್ತಿದ್ದಂತೆ ಮೊದಲು ನಾಗನೂರು ರುದ್ರಾಕ್ಷಿ ಮಠಕ್ಕೆ ಭೇಟಿ ನೀಡಿದೆ. ಆ ಬಳಿಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್, ಕಿತ್ತೂರು ರಾಣಿ ಚನ್ನಮ್ಮ, ಶಿವಾಜಿ ಮಹಾರಾಜ, ಸಂಗೊಳ್ಳಿ ರಾಯಣ್ಣ ಸೇರಿ ಮಹನೀಯರ ಪುತ್ಥಳಿಗೆ ಮಾಲಾರ್ಪಣೆ ಮಾಡುತ್ತಿದ್ದೇನೆ. ತುಂಬಾ ಖುಷಿ ಆಗುತ್ತಿದೆ" ಎಂದರು.
ಮುಂದುವರಿದು ಪ್ರಿಯಾಂಕ ಅವರು, "ಚಿಕ್ಕೋಡಿ ಹೊಸ ಜಿಲ್ಲೆ ಆಗಬೇಕು ಎಂದು ಅಲ್ಲಿನ ಜನರು ಮನವಿ ಸಲ್ಲಿಸಿದ್ದಾರೆ. ಆ ಭಾಗದ ಅಭಿವೃದ್ಧಿ ಆಗುವ ಉದ್ದೇಶದಿಂದ ಚಿಕ್ಕೋಡಿ ಜಿಲ್ಲೆ ಆಗುವುದು ಒಳ್ಳೆಯದು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸುತ್ತೇವೆ. ಆ ಬಗ್ಗೆ ನಾನು ಕೂಡ ಧ್ವನಿ ಎತ್ತುತ್ತೇನೆ. ಈಗ ನಾನು ಕಲಿಯೋದು... ಅಷ್ಟೇ ಮಾಡುವಂತೆ ತಂದೆಯವರು ಹೇಳಿದ್ದಾರೆ. ಸಂಸತ್ತಿನಲ್ಲಿ ದೊಡ್ಡ ನಾಯಕರು ಮಾತನಾಡುವುದನ್ನು ಆಲಿಸು, ಅವರು ಯಾವ ವಿಚಾರ ಎತ್ತಿಕೊಳ್ಳುತ್ತಾರೆ ಎಂಬುದನ್ನು ನೋಡುವಂತೆ ತಿಳಿಸಿದ್ದಾರೆ. ಮುಂದೆ ನಮ್ಮ ವಿಚಾರಗಳನ್ನು ಹೇಗೆ ಮಂಡಿಸಬೇಕು ಎಂಬುದು ಇದರಿಂದ ಕಲಿಯಲು ಅನುಕೂಲ ಆಗಲಿದೆ" ಎಂದು ಪ್ರಿಯಾಂಕಾ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
"ನಾನು ಈ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಿದರೆ, ಜನ ಮೆಚ್ಚಿ ಮುಂದಿನ ಚುನಾವಣೆಯಲ್ಲಿ ಇನ್ನೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬಹುದು". ಬೆಳಗಾವಿ ಮತ್ತು ಬೆಂಗಳೂರಿನಿಂದ ತಮ್ಮನ್ನು ಸೋಲಿಸಲು ಡೈರೆಕ್ಷನ್ ಬಂದಿತ್ತು ಎಂಬ ಸತೀಶ ಜಾರಕಿಹೊಳಿ ಹೇಳಿಕೆಗೆ "ಆ ರೀತಿ ಏನೂ ಇಲ್ಲ. ಎಲ್ಲರೂ ತಮ್ಮ ಕ್ಷೇತ್ರದಲ್ಲಿ ನನ್ನ ಗೆಲ್ಲಿಸಲು ಪ್ರಯತ್ನಿಸಿದ್ದಾರೆ. ಒಂದು ಒಳ್ಳೆಯ ತಂಡವಾಗಿ ನಾವೆಲ್ಲಾ ಕೆಲಸ ಮಾಡಿದ್ದರಿಂದ 90 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಲು ಸಾಧ್ಯವಾಯಿತು" ಎಂದರು.