ಬೆಂಗಳೂರು: ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ರಜೆಗಳು ಸಮೀಪಿಸುತ್ತಿದ್ದಂತೆ ಖಾಸಗಿ ಬಸ್ ಟಿಕೆಟ್ ದರಗಳು ಮುಗಿಲು ಮುಟ್ಟಿವೆ. ಬೆಂಗಳೂರು ಹಾಗೂ ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಗಳು 1,000 ರೂ.ನಿಂದ 1,500 ರೂ.ವರೆಗೆ ಟಿಕೆಟ್ ದರ ವಸೂಲಿ ಮಾಡುತ್ತಿವೆ. ಕೆಲವು ಬಸ್‌ಗಳಲ್ಲಂತೂ ಟಿಕೆಟ್ ದರ 2,000 ರೂ. ವರೆಗೂ ಇದೆ. ಕೆಎಸ್‌ಆರ್‌ಟಿಸಿ ಬಸ್ಗಳಲ್ಲಿಯೂ ಬಹುತೇಕ ಸೀಟ್ಗಳು ಮುಂಗಡ ಕಾಯ್ದಿರಿಸಲಾಗಿದೆ. ವಿಶೇಷ ಬಸ್ಗಳಲ್ಲಿಯೂ ಮುಂಗಡ ಕಾಯ್ದಿರಿಸುವಿಕೆ ಜೋರಾಗಿದೆ. ಹೀಗಾಗಿ ಪ್ರಯಾಣಿಕರು ದುಬಾರಿ ದರ ತೆತ್ತು ಆನ್‌ಲೈನ್‌ನಲ್ಲಿ ಖಾಸಗಿ ಬಸ್‌ಗಳ ಟಿಕೆಟ್ ಖರೀದಿಸುತ್ತಿದ್ದಾರೆ.
ಬೆಂಗಳೂರು ಹಾಗೂ ಉಡುಪಿ ಮಧ್ಯೆ ಸಾಮಾನ್ಯವಾಗಿ 400 ರೂ.ನಿಂದ 700 ರೂ. ಇರುತ್ತಿದ್ದ ಖಾಸಗಿ ಬಸ್ ಟಿಕೆಟ್ ದರ ಈಗ 1,000 ರೂ. ದಾಟಿದೆ. ಹಬ್ಬ ಹಾಗೂ ದೀರ್ಘ ವಾರಾಂತ್ಯದ ಕಾರಣ ಪ್ರಯಾಣಿಕರ ಹೆಚ್ಚುವರಿ ಬೇಡಿಕೆಗೆ ಅನುಗುಣವಾಗಿ ಕೆಲವು ಖಾಸಗಿ ಬಸ್ ಸಂಸ್ಥೆಗಳೂ ಸಹ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲು ಮುಂದಾಗಿವೆ. ಆದರೆ ಈ ಬಸ್ಗಳಲ್ಲಿ ಟಿಕೆಟ್ ದರ ದುಪ್ಪಟ್ಟು ನಿಗದಿಪಡಿಸಲಾಗುತ್ತಿದೆ.
ಇನ್ನು ಮಂಗಳೂರು ಮತ್ತು ಬೆಂಗಳೂರು ನಡುವಿನ ಕೆಎಸ್‌ಆರ್‌ಟಿಸಿ ಬಸ್ ದರಗಳು ಸ್ಥಿರವಾಗಿವೆ. ಹೆಚ್ಚುವರಿ ವಿಶೇಷ ಬಸ್ ಸೇವೆಗಳಿಗೆ ಮಾತ್ರ ಶೇ 20ರಷ್ಟು ದರ ಹೆಚ್ಚಳ ಮಾಡಲಾಗಿದೆ. ಉಡುಪಿ ಮತ್ತು ಕುಂದಾಪುರ ಮಾರ್ಗಗಳು ಸೇರಿದಂತೆ ಕರಾವಳಿ ಪ್ರದೇಶಗಳಿಗೆ ಈವರೆಗೆ 18 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ನಿಯೋಜಿಸಿದೆ ಎಂದು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿಯಿಂದ 2000 ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ: ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಬೆಂಗಳೂರಿನಿಂದ ವಿವಿಧ ಕಡೆಗಳಿಗೆ 2000 ಹೆಚ್ಚುವರಿ ಬಸ್‌ಗಳ ಸಂಚಾರದ ವ್ಯವಸ್ಥೆೆಯನ್ನು ಮಾಡಿದ್ದು, ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ನವೆಂಬರ್ ಒಂದರಂದು 3 ಹಾಗೂ 4ರಂದು ವಿಶೇಷ ಬಸ್ ಕಾರ್ಯಾಚರಣೆ ಇರಲಿದೆ ಎಂದು ಮಾಹಿತಿ ನೀಡಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಬಸ್ ಇರಲಿದೆ. ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆಗೆ ವಿಶೇಷ ಬಸ್ ಸೌಲಭ್ಯ ಇರಲಿದೆ ಎಂದಿದೆ.
ತಮಿಳುನಾಡು ಮತ್ತು ಕೇರಳ ಕಡೆಗೆ ಮುಕ್ತವಾಗಿ ಮಧುರೈ, ಕುಂಬಕೋಣಂ, ಚೆನ್ನೈ, ಕೊಯಮತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆೆ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ ಎಂದು ಹೇಳಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟ್ ಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್‌ಅಪ್ ಪಾಯಿಂಟ್‌ನ ಹೆಸರನ್ನು ಗಮನಿಸಬೇಕು ಎಂದು ನಿಗಮ ತಿಳಿಸಿದೆ.
ಇ-ಟಿಕೆಟ್ ಬುಕಿಂಗ್ ಅನ್ನು ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಮೂಲಕ ಮಾಡಬಹುದಾಗಿದ್ದು, ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದಲ್ಲಿ ಶೇ.5ರಷ್ಟು ರಿಯಾಯಿತಿ, ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ನ್ನು ಒಂದೇ ಬಾರಿ ಕಾಯ್ದಿರಿಸಿದಲ್ಲಿ ಬರುವ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಹೇಳಿದೆ.
ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ ಹಾಗೂ ಪುದುಚೇರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳಿದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: ದೀಪಾವಳಿ ವೇಳೆ ಜನದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ಕ್ರಮ: ಹೆಚ್ಚುವರಿ ರೈಲು, ಕೋಚ್ ಅಳವಡಿಕೆ